ಬೆಂಗಳೂರು: ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಯುವತಿ ಮೃತಪಟ್ಟಿರುವ ಘಟನೆ ರಾಜ್ಯ ರಾಜಧಾನಿಯ ಸೋಲದೇವನಹಳ್ಳಿಯಲ್ಲಿ ನಡೆದಿದೆ.
24 ವರ್ಷದ ಕೀರ್ತನಾ ಮೃತ ಯುವತಿ. ಹೆಬ್ಬಾಳ ಮೂಲದ ಯುವತಿ ಕೀರ್ತನಾ ಮತ್ತು ಆಕೆಯ ಸ್ನೇಹಿತೆಯ ಜತೆ ಆಚಾರ್ಯ ಕಾಲೇಜಿನಲ್ಲಿ ನಡೆಯುತ್ತಿದ್ದ ಸ್ಯಾಂಡಲ್ ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನೋಡೋಕೆ ಹೋಗಿದ್ದರು.
ಕ್ರಿಕೆಟ್ ಮ್ಯಾಚ್ ನೋಡಿಕೊಂಡು ವಾಪಸ್ ಬರ್ತಿದ್ದ ವೇಳೆ ಎರಡು ಬೈಕ್‌ಗಳ ಮೇಲೆ ಮರದ ಕೊಂಬೆ ಬಿದ್ದಿದೆ. ಈ ವೇಳೆ ಕೀರ್ತನಾ ಸ್ಥಳದಲ್ಲೇ ಮೃತಪಟ್ಟರೇ ಆಕೆಯ ಸ್ನೇಹಿತೆ ಮತ್ತು ಮತ್ತೊಂದು ಬೈಕ್‌ನಲ್ಲಿದ್ದ ಭಾಸ್ಕರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯರು ತಕ್ಷಣವೇ ಮರದ ಕೊಂಬೆಗಳನ್ನು ತೆರವು ಮಾಡಿ ಇಬ್ಬರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಮರದ ಕೊಂಬೆ ಬಿದ್ದು ದುರಂತ ಸಂಭವಿಸುತ್ತಿರುವ ಘಟನೆ ಹೆಚ್ಚುತ್ತಿದೆ. ಕೆಲ ತಿಂಗಳ ಹಿಂದೆ ಮರದ ಕೊಂಬೆ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿತ್ತು. ಇದೀಗ ಬೃಹತ್ ಮರ ಬಿದ್ದು ಸ್ಥಳದಲ್ಲೇ ಯುವತಿ ಮೃತಪಟ್ಟಿದ್ದಾರೆ.
ಇತ್ತ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಯುವತಿ ಪೊಷಕರು, ಕುಟುಂಬಸ್ಥರು ಬಂದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
Related
