ಬೆಂಗಳೂರು: ದೇಶದಲ್ಲಿ ಮೋದಿ ಯುಗ ಮುಕ್ತಾಯವಾಗಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮತ್ತೆ ಮರುಜೀವ ಬಂದಿದೆ. ಹೀಗಾಗಿ ದೇಶವನ್ನು ಉಳಿಸಲು ನಾವು ಮುಂದಿನ ಚುನಾವಣೆಗಳಲ್ಲಿ ಗೆಲ್ಲಬೇಕು ಎಂದು ಆಮ್ ಆದ್ಮಿ ಪಾರ್ಟಿ ಕರ್ನಾಟಕದ ಉಸ್ತುವಾರಿ ದಿಲೀಪ್ ಪಾಂಡೆ ಹೇಳಿದ್ದಾರೆ.
ಇಂದು ನಗರದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ದಿಲೀಪ್ ಪಾಂಡೆ, ಕಳೆದ ಚುನಾವಣೆಯಲ್ಲಿ ಆದ ಅನುಭವಗಳಿಂದ ಪಾಠ ಕಲಿತು ಮುಂದಿನ ದಿನಗಳಲ್ಲಿ ಸರಿಯಾದ ಹೆಜ್ಜೆ ಇಡಬೇಕು ಎಂದು ಪಕ್ಷದ ನಾಯಕರು, ಕಾರ್ಯಕರ್ತರಿಗೆ ಕರೆ ನೀಡಿದರು.
ಆಮ್ ಆದ್ಮಿ ಪಾರ್ಟಿ ಶಕ್ತಿ ಏನೆಂದು ನಮಗಿಂತ ಅಮಿತ್ ಶಾ ಮತ್ತು ಮೋದಿಗೆ ಚೆನ್ನಾಗಿ ಅರ್ಥವಾಗಿದೆ. ಪ್ರಜ್ವಲ್ ರೇವಣ್ಣ, ನವನೀತ್ ರಾಣಾ, ಸ್ಮೃತಿ ಇರಾನಿ, ಮಾಧವಿ ಲತಾ ಇವರ ಸೋಲು ನೋಡಿದಾಗ ಭಗವಂತ ರಾಮನೇ ಇವರಿಗೆಲ್ಲ ಶಾಸ್ತಿ ಮಾಡಿದಂತಿದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ದೇಶದಲ್ಲಿ 18 ಸಾವಿರ ರಾಜಕೀಯ ಪಕ್ಷಗಳು ಇದ್ದರೂ ಅಮಿತ್ ಶಾ ಮತ್ತು ನರೇಂದ್ರ ಮೋದಿ ಆಮ್ ಆದ್ಮಿ ಪಾರ್ಟಿ ಹಿಂದೆ ಬಿದ್ದಿದ್ದಾರೆ. ಪಕ್ಷದ ನಾಲ್ವರು ಅಗ್ರ ನಾಯಕರನ್ನು ಜೈಲಿಗೆ ಹಾಕಿದರೂ, ಆಮ್ ಆದ್ಮಿ ಪಾರ್ಟಿಯನ್ನು ಮುಗಿಸಲು ಸಾಧ್ಯವಾಗಿಲ್ಲ ಎಂದರು. ದೇಶದಲ್ಲಿ ಕೇಜ್ರಿವಾಲ್ ರವರ ವಿಚಾರವನ್ನು ಯಾರು ಎಂದಿಗೂ ಸಾಯಿಸಲು ಸಾಧ್ಯವಿಲ್ಲ ಎಂದರು.
ದೆಹಲಿಯ ಬೀದಿ ಬದಿ ವ್ಯಾಪಾರಿಯ ಮಗ ನೀಟ್, ಐಐಟಿಗೆ ಆಯ್ಕೆಯಾಗುವಾಗ ಕರ್ನಾಟಕದ ಬೀದಿ ಬದಿ ಮಕ್ಕಳಿಗೆ ಈ ಭಾಗ್ಯ ಏಕಿಲ್ಲ ಎನ್ನುವ ಆತಂಕ ನಮಗಿದೆ. ರಾಜ್ಯದಲ್ಲಿ ಮುಂಬರುವ ಬಿಬಿಎಂಪಿ, ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲಾ ಸ್ಥಳೀಯ ಚುನಾವಣೆಗಳಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಎಲ್ಲರೂ ಸ್ಪರ್ಧೆ ಮಾಡಬೇಕು. ಗೆಲ್ಲುವ ಸಾಮರ್ಥ್ಯ ತೋರಿಸಿದರೆ ಸಮಾಜದಲ್ಲಿ ಎಲ್ಲರೂ ನಮ್ಮ ಜೊತೆ ಕೈಜೋಡಿಸುತ್ತಾರೆ ಎಂದು ಪೃಥ್ವಿ ರೆಡ್ಡಿ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.
10 ವರ್ಷಗಳಿಂದ ಗದಗ ಜಿಲ್ಲೆ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಎ.ವೈ. ನವಲಗುಂದ್ ಈ ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು. ಬೇರೆ ಬೇರೆ ಜಿಲ್ಲೆಗಳಲ್ಲಿ ಅನೇಕ ನಾಯಕರುಗಳು ಇದೆ ಸಂದರ್ಭದಲ್ಲಿ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಮೋಹನ್ ದಾಸರಿ, ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನಿ, ಬಿ.ಟಿ. ನಾಗಣ್ಣ, ಅರ್ಜುನ್ ಹಲಿಗಿಗೌಡ, ರಾಜ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.