ಬೆಂಗಳೂರು: ಮಲ್ಲೇಶ್ವರಂನಲ್ಲಿ ಪಾರ್ಕ್‌ನ ಗೇಟ್ ಬಿದ್ದು ಸೆಪ್ಟೆಂಬರ್ 22ರಂದು ಬಾಲಕ ಮೃತಪಟ್ಟ ಬಳಿಕ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮಕ್ಕಳ ಆಟದ ಮೈದಾನ, ಪಾರ್ಕ್‌ಗಳ ಸಾಮಾಜಿಕ ಪರಿಶೋಧನೆಗೆ ಆಮ್ ಆದ್ಮಿ ಪಾರ್ಟಿ ಮುಂದಾಗಿದ್ದು, ಸಾರ್ವಜನಿಕರು ತಮ್ಮ ಸುತ್ತ ಮುತ್ತಲಿರುವ ಆಟದ ಮೈದಾನ, ಸಮುದಾಯ ಭವನ, ಪಾರ್ಕ್‌ಗಳಲ್ಲಿ ಅವ್ಯವಸ್ಥೆ ಕಂಡು ಬಂದರೆ ನಮ್ಮ ಗಮನಕ್ಕೆ ತನ್ನಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಮನವಿ ಮಾಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟದ ಮೈದಾನಗಳು ಮತ್ತು ಪಾರ್ಕ್‌ಗಳಲ್ಲಿ ಕಾಮಗಾರಿ ನಡೆಸಿದ ನಂತರ, ಕಾಲ ಕಾಲಕ್ಕೆ ಅವುಗಳ ಮೇಲ್ವಿಚಾರಣೆ ನಡೆಸಬೇಕು. ಮಕ್ಕಳಿಗೆ, ವಯೋವೃದ್ಧರಿಗೆ ಅಪಾಯ ಆಗದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಆದರೆ ಈ ವಿಚಾರದಲ್ಲಿ ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ ತೋರಿರುವುದು ಸ್ಪಷ್ಟವಾಗಿದೆ.
2010 ರಲ್ಲಿ ಸಂಜನಾ ಎನ್ನುವ 17 ವರ್ಷದ ಹುಡುಗಿ ಕಾಲೇಜಿನ ಗೋಡೆ ಕುಸಿದು ಮೃತಪಟ್ಟಿದ್ದರು. 2016ರಲ್ಲಿ ವಿಕ್ರಮ್ ಎನ್ನುವ ಬಾಲಕ ಲಾಲ್‌ಬಾಗ್‌ನಲ್ಲಿರುವ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿದ್ದ, ಸಾರ್ವಜನಿಕ ಸ್ಥಳಗಳಲ್ಲಿ ಕಾಮಗಾರಿ ನಡೆಸುವಾಗ ಈ ರೀತಿ ನಿರ್ಲಕ್ಷ್ಯ ವಹಿಸಿದ್ದು ಜನರ ಜೀವಕ್ಕೆ ಅಪಾಯ ತರುತ್ತಿದೆ ಎಂದರು.
ಮಲ್ಲೇಶ್ವರಂ ಪಾರ್ಕ್‌ನಲ್ಲಿ ಗೇಟ್ ಕುಸಿದು ಬಾಲಕ ಮೃತಪಟ್ಟ ಘಟನೆಯನ್ನು ಗಮನಿಸಿದರೆ, ಬಿಬಿಎಂಪಿ ಜನರಿಗೋಸ್ಕರ ಕೆಲಸ ಮಾಡುತ್ತಿದೆಯಾ ಎನ್ನುವ ಅನುಮಾನ ಮೂಡಿದೆ. ಬೃಹದಾಕಾರಾದ ಗೇಟ್‌ಗೆ ಅತ್ಯಂತ ಸಣ್ಣ ಇಂಚಸ್ ಹಾಕಿದ್ದಾರೆ. ಆಟದ ಮೈದಾನಗಳಲ್ಲಿ ಮಕ್ಕಳು ಗೇಟ್‌ಗಳನ್ನು ಹಿಡಿದು ಆಟವಾಡುತ್ತಾರೆ.
ಆದರೆ ಗುತ್ತಿಗೆದಾರರು ನಿರ್ಲಕ್ಷ್ಯದಿಂದ ಕಾಮಗಾರಿ ಮಾಡಿದ್ದಾರೆ, ಬಿಲ್ ಮಾಡುವ ಇಂಜಿನಿಯರ್ ಕೂಡ ಸರ್ಕಾರದ ಮಾನದಂಡಗಳನ್ನು ಗಾಳಿಗೆ ತೂರಿದ್ದರೂ, ಕಮಿಷನ್ ಆಸೆಗೆ ಬಿಲ್ ಮಾಡಿಕೊಟ್ಟಿದ್ದು ಈಗ ಒಂದು ಜೀವ ಬಲಿಯಾಗಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಚುನಾವಣೆ ನಡೆಯದ ಕಾರಣ, ನಾಲ್ಕು ವರ್ಷಗಳಿಂದ ಕಾರ್ಪೊರೇಟರ್ ಕೂಡ ಇಲ್ಲ. ಸರ್ಕಾರ ಕೂಡ ಚುನಾವಣೆ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದೆ. ಮತ್ತೊಂದು ಕಡೆ ಬಿಬಿಎಂಪಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಂತಹ ಅನಾಹುತಗಳು ನಡೆದಾಗ ನಮ್ಮ ಸರ್ಕಾರ ಜನರ ಕಣ್ಣೊರೆಸಲು ಒಂದಷ್ಟು ಪರಿಹಾರ ಕೊಟ್ಟು, ಕ್ರಮದ ಭರವಸೆ ಕೊಡುತ್ತದೆ. ಸರಿಯಾದ ಕ್ರಮ ತೆಗೆದುಕೊಂಡಿದ್ದರು ಇಂತಹ ಘಟನೆ ನಡೆಯುತ್ತಲೇ ಇರಲಿಲ್ಲ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಬ್ರಾಂಡ್ ಬೆಂಗಳೂರಿನಲ್ಲಿ ಗುಣಮಟ್ಟದ ಕೆಲಸಗಳು ನಡೆಯುವಂತೆ ನೋಡಿಕೊಳ್ಳಲಿ. ಬಿಜೆಪಿ ಭ್ರಷ್ಟಾಚಾರ ಮಾಡಿದೆ ಎಂದು ನಿಮಗೆ ಜನ ಅಧಿಕಾರ ಕೊಟ್ಟಿದ್ದಾರೆ, ನೀವೂ ಕೂಡ ಬಿಜೆಪಿಯವರಂತೆ ಮಾಡಬೇಡಿ ಎಂದು ಒತ್ತಾಯಿಸಿದರು.
ಆಮ್ ಆದ್ಮಿ ಪಾರ್ಟಿ ಕೂಡ ಜವಾಬ್ದಾರಿ ತೆಗೆದುಕೊಂಡು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಾರ್ಕ್‌ಗಳು, ಸಾರ್ವಜನಿಕ ಕಟ್ಟಡಗಳು, ಆಟದ ಮೈದಾನಗಳಲ್ಲಿ ಸುರಕ್ಷತೆ ಎಷ್ಟಿದೆ ಎನ್ನುವ ಬಗ್ಗೆ ಸಾಮಾಜಿಕ ಪರಿಶೋಧನೆ ನಡೆಸುತ್ತೇವೆ. ಆಮ್ ಆದ್ಮಿ ಪಾರ್ಟಿ ಬೆಂಗಳೂರಿನ ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ವಾರ್ಡ್‌ನ ಉಸ್ತುವಾರಿಗಳು, ಟಿಕೆಟ್ ಆಕಾಂಕ್ಷಿಗಳು ಈ ಸುರಕ್ಷತಾ ಆಡಿಟ್ ಮಾಡಲಿದ್ದಾರೆ, ಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನಿಮ್ಮ ಸುತ್ತ ಮುತ್ತಲಿನ ಸಾರ್ವಜನಿಕ ಸ್ಥಳಗಳಾದ ಆಟದ ಮೈದಾನ, ಪಾರ್ಕ್‌ಗಳಲ್ಲಿ ಸಮಸ್ಯೆಗಳಿದ್ದರೆ, ಬಿಬಿಎಂಪಿ ಅಧಿಕಾರಿಗಳು ಅದನ್ನು ನಿರ್ಲಕ್ಷ್ಯ ಮಾಡಿದ್ದರೆ. 7406999521 ಸಂಖ್ಯೆಗೆ ವಾಟ್ಸಾಪ್ ಮಾಡಿದರೆ, ನಾವು ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇವೆ ಎಂದು ಹೇಳಿದರು.