ಬೀದರ್: ನಿತ್ಯ ಶಾಲಾ-ಕಾಲೇಜುಗಳಿಗೆ ಹಳ್ಳಿ ಹಳ್ಳಿಯಿಂದ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕ ಎರಡು ಕಡೆ ಪ್ರತಿಭಟನೆ ನಡೆಸಿತು.

ಬೀದರ್‌ನ ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿ ಕಚೇರಿ ಹಾಗೂ ಬಸ್ ಘಟಕದ ಎದುರು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ವಿವಿಧ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಇದರ ಪರಿಣಾಮವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ಗಂಭೀರ ಅಡ್ಡಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಘಟಕಗಳಿಗೆ ಮುತ್ತಿಗೆ ಹಾಕಿ ಭಾರಿ ಹೋರಾಟ ನಡೆಸಲಾಗುವುದು ಎಂದುಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರ ಬೇಡಿಕೆಗಳೇನು?: ಗ್ರಾಮೀಣ ಪ್ರದೇಶಗಳಿಂದ ಬೀದರ್ ನಗರಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‍ಗಳನ್ನು ಹೆಚ್ಚಿಸಬೇಕು. ಬೀದರ್‌ನಿಂದ ಹುಮನಾಬಾದ್‍ಗೆ ತೆರಳುವ ಪ್ರತಿಯೊಂದು ತಡೆರಹಿತ ಬಸ್‍ಗಳು ಕೋಳಾರ (ಕೆ) ಗ್ರಾಮದ ಮೇಲೆ ಹೋಗಿ ನಿಲುಗಡೆ ಮಾಡಬೇಕು ಹಾಗೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು.
ನೌಬಾದ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್‍ಗಳು ಪ್ರಥಮ ದರ್ಜೆ ಕಾಲೇಜು ಎದುರು ನಿಲುಗಡೆ ಮಾಡಬೇಕು. ನಿಜಾಂಪೂರ ಗ್ರಾಮಕ್ಕೆ ಹೊಸ ಬಸ್ ವ್ಯವಸ್ಥೆ ಕಲ್ಪಿಸಬೇಕು. ಔರಾದ ಸಿರ್ಸಿ (ಎ) ಗ್ರಾಮಕ್ಕೆ ಹೊಸ ಬಸ್ ವ್ಯವಸ್ಥೆ ಒದಗಿಸಬೇಕು.
ಹುಮನಾಬಾದ್ ಹಾಗೂ ಮನ್ನಾವಿಖೇಳ್ಳಿಗೆ ತೆರಳುವ ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಚಿಲ್ಲರ್ಗಿ, ಮರಕಲ್ ಹಾಗೂ ಬೀದರ್ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚು ಬಸ್‍ಗಳ ಹಾಕಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.
ಎಬಿವಿಪಿ ನಗರ ಕಾರ್ಯದರ್ಶಿ ಸದಾನಂದ ಮೇತ್ರೆ, ಸಹ ಕಾರ್ಯದರ್ಶಿಗಳಾದ ಲಿಂಗದೇವ ಗುತ್ತಿ, ಅಭಿಷೇಕ ರಾಂಪೂರೆ, ಹೋರಾಟ ಪ್ರಮುಖ ಅಮರ, ತಾಲೂಕಾ ಸಂಚಾಲಕ ನೀತಿನ್ ಮೂಲೆಗೆ, ಮಹಾಂತೇಶ, ರವಿ ಕಿರಣ, ವೀರಯ್ಯ ಸ್ವಾಮಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Related










