NEWS

ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಕ್ರಮ: KSRTC ಎಂಡಿ ಅಕ್ರಮ್‌ ಪಾಷ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಿರುವುದರಿಂದ ನೌಕರರು ಯಾವುದೇ ಕಾರಣಕ್ಕೂ ಈ ಉದ್ದೇಶಿತ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಬಾರದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಎಂಡಿ ಅವರು, ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 5.08.2025ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಮುಷ್ಕರದ ನೋಟಿಸನ್ನು ಆಡಳಿತ ವರ್ಗಕ್ಕೆ ನೀಡಿದ್ದಾರೆ.

ಹೀಗಾಗಿ ಈ ಎಲ್ಲ ಅಂಶಗಳನ್ನು ನಿಗಮದ ನೌಕರರ ಗಮನಕ್ಕೆ ತರಲಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಾಜ್ಯದ ಜನಸಾಮಾನ್ಯರಿಗೆ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಅದಕ್ಕನುಗುಣವಾಗಿ ಕರ್ನಾಟಕ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ-2013 (Karnataka Act No-25/2015) ಯಡಿ ತಂದು ಅಧಿಸೂಚನೆಯನ್ನು ಹೊರಡಿಸಿದ್ದು, ಅದರನ್ವಯ ರಸ್ತೆ ಸಾರಿಗೆ ನಿಗಮಗಳ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ ಮತ್ತು ಇತರೆ ಯಾವುದೇ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳು ನಿಗಮದ ನೌಕರರು ಮುಷ್ಕರ ಹೂಡುವಂತೆ ಪ್ರಚೋದಿಸುವಂತಿಲ್ಲ ಹಾಗೂ ಬೆಂಬಲವನ್ನು ಸಹ ವ್ಯಕ್ತಪಡಿಸುವಂತಿಲ್ಲ.

ಅಲ್ಲದೇ, ಕರ್ನಾಟಕ ಸರ್ಕಾರವು ಎಲ್ಲ ನಾಲ್ಕೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂಬುದಾಗಿ ಸಹ ಘೋಷಿಸಿದೆ. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ಆಡಳಿತ ವರ್ಗಕ್ಕೆ ನೀಡಿರುವ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿವಾದವು ಸದ್ಯ ರಾಜ್ಯದ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿದ್ದು, ಕೈಗಾರಿಕಾ ವಿವಾದಗಳ ಕಾಯಿದೆ-1947 ಮತ್ತು ನಿಯಮಗಳನ್ನಯ “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಯ ನೌಕರರ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿವಾದವು ರಾಜೀ ಸಂಧಾನದಲ್ಲಿರುವಾಗ ನೌಕರರು ಮುಷ್ಕರ ಹೂಡುವಂತಿಲ್ಲ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನಿಗಮದ ನೌಕರರು ಯಾವುದೇ ಕಾರಣಕ್ಕೂ ಆ.5 ರಿಂದ ಉದ್ದೇಶಿತ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಬಾರದು ಮತ್ತು ತಮ್ಮ ದೈನಂದಿನ ಕರ್ತವ್ಯಕ್ಕೆ ಅವಶ್ಯ ಹಾಜರಾಗಿ, ರಾಜ್ಯದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಎಂಡಿ ಮನವಿ ಮಾಡಿದ್ದಾರೆ.

ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ನಿರ್ದೇಶನ ನೀಡಿದ ಎಂಡಿ: ಆ.4ರಿಂದಲೇ ಜಾರಿಗೆ ಬರುವಂತೆ ಮುಷ್ಕರದ ಅವಧಿಯಲ್ಲಿ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು. ಆ.4ರಿಂದಲೇ ಜಾರಿಗೆ ಬರುವಂತೆ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು.

ಆ.4ರಿಂದಲೇ ಜಾರಿಗೆ ಬರುವಂತೆ ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಗೈರು ಹಾಜರಾಗುವ ನೌಕರರ ವಿರುದ್ಧ ಕೆಲಸ ಮಾಡದಿದ್ದಾಗ ವೇತನವಿಲ್ಲ” ಎಂಬ ತತ್ವದ ಪ್ರಕಾರ ಕ್ರಮ ಕೈಗೊಳ್ಳುವುದು.ಈ ಸೂಚನೆಗಳು ವಾರದ ರಜೆ ಮತ್ತು ದೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಅನ್ವಯಿಸುವುದಿಲ್ಲ. ಆದರೆ, ಅನಿವಾರ್ಯ ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯದ ಮೇಲೆ ನಿಯೋಜಿಸುವುದು.

ಆ.4ರಂದು ಮತ್ತು ನಂತರದ ಮುಷ್ಕರದ ದಿನಗಳಂದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ಪಟ್ಟಿಯಲ್ಲಿ ದಿನವಹಿ/ ಘಟಕವಾರು/ ವರ್ಗಾವಾರು ಸಿದ್ಧಪಡಿಸಿ, ಮೇಲೆ ತಿಳಿಸಿರುವಂತೆ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ತತ್ವದನ್ವಯ ವೇತನ ಕಡಿತಗೊಳಿಸುವುದು. ಅಲ್ಲದೇ, ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳುವುದು.

ವಿಶೇಷ ಸೂಚನೆ: ರಾಜ್ಯದ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು 29.01.2004 ರಂದು Writ Appeal No.6347 of 2000( LK) C/W Writ Appeal No.1005 and 1006 of 2001ರಲ್ಲಿ ನೀಡಿದ ತೀರ್ಪಿನಲ್ಲಿ ಇಂತಹ ಸಂದರ್ಭಗಳಲ್ಲಿ ನೌಕರರು ತಮ್ಮ ದೈನಂದಿನ ಕರ್ತವ್ಯಕ್ಕೆ ಗೈರು ಹಾಜರಾದ ಪಕ್ಷದಲ್ಲಿ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ಸಾಮಾನ್ಯ ತತ್ವದನ್ವಯ ದಿನದ ವೇತನವನ್ನು ಕಡಿತಗೊಳಿಸುವುದರ ಜತೆಗೆ ಆಡಳಿತವರ್ಗವು ಅನಧಿಕೃತವಾಗಿ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕಮ ಜರುಗಿಸಬಹುದಾಗಿದೆ ಎಂದು ಆದೇಶಿಸಿದ್ದು, ಈ ವಿಷಯವನ್ನು ನಿಗಮದ ನೌಕರರ ಗಮನಕ್ಕೆ ಅವಶ್ಯ ತರಬೇಕು ಎಂದು ಎಂಡಿ ಆದೇಶದಲ್ಲಿ ವಿವರಿಸಿದ್ದಾರೆ.  ಎಂಡಿ ಆದೇಶದ PDF: No Work No Pay Order-05.08.2025

Megha
the authorMegha

Leave a Reply

error: Content is protected !!