ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಭಯಾನಕ ಕೊಲೆ ಪ್ರಕರಣವೊಂದು ವಾರದ ಬಳಿಕ ಬೆಳಕಿಗೆ ಬಂದಿದೆ. ಕೆ.ವಿ.ಶ್ರೀನಾಥ್ (34) ಎಂಬಾತನನ್ನು ಮನೆಯಲ್ಲೇ ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆದಿರುವ ಘಟನೆ ನಡೆದಿದೆ.
ಮೂರು ದಿನದಿಂದ ಹುಡುಕಿದರೂ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಈ ಘಟನೆಯೂ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಧವ ರಾವ್ ಎಂಬಾತ ಈ ಕೊಲೆ ಮಾಡಿ ಆರೋಪಿಯಾಗಿದ್ದು, ಸದ್ಯ ಸಂಪಿಗೇಹಳ್ಳಿ ಪೊಲೀಸರಿಂದ ಈ ಭಯಾನಕ ಕೊಲೆಯ ಕೃತ್ಯ ಬೆಳಕಿಗೆ ಬಂದಿದೆ.
ಅಷ್ಟಕ್ಕೂ ಆಗಿದ್ದೇನು?: ಥಣಿಸಂದ್ರದ ಅಂಜನಾದ್ರಿ ಲೇಔಟ್ನಲ್ಲಿ ನಿವಾಸಿ ಕೆ.ವಿ.ಶ್ರೀನಾಥ್ ಹತ್ಯೆಯಾದವರು. ಬಸವೇಶ್ವರ ನಗರದಲ್ಲಿರೋ ಮಾರ್ಗದರ್ಶಿ ಚಿಟ್ ಫಂಡ್ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದರು. ಹೀಗೆ ಕೆಲಸಕ್ಕೆಂದು ಮೇ 28ರ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದ. ಆದರೆ ರಾತ್ರಿ ಎಷ್ಟೊತ್ತಾದರೂ ಶ್ರೀನಾಥ್ ಮನೆಗೆ ವಾಪಸ್ ಆಗಿರಲ್ಲ. ಈ ಸಂಬಂಧ ಶ್ರೀನಾಥ್ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಇನ್ನು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಮೇ.28ರಂದು ಕೆ.ಆರ್.ಪುರಂನ ವಿಜಿನಪುರದಲ್ಲಿರೋ ಮಾಧವರಾವ್ ಮನೆಗೆ ಹೋಗಿರೋದು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಮಾಧವರಾವ್ ಮನೆಗೆ ಶ್ರೀನಾಥ್ ಎಂಟ್ರಿ ಆಗಿರುವುದು ಗೊತ್ತಾಗಿದೆ. ಆದ್ರೆ ಕೆ.ವಿ.ಶ್ರೀನಾಥ್ ಮನೆಯಿಂದ ಹೊರಗೆ ಹೋಗುವುದು ರೆಕಾರ್ಡ್ ಆಗಿರಲಿಲ್ಲ.
ಜತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ವು. ಇದರಿಂದ ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದ. ಬಳಿಕ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಧವರಾವ್ನನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಬಳಿಕ ಪೊಲೀಸರ ವಿಚಾರಣೆ ವೇಳೆ ಮಾಧವರಾವ್ ಅಸಲಿ ವಿಚಾರ ಬಿಚ್ಚಿಟ್ಟಿದ್ದಾನೆ. ಮಾಧವರಾವ್ ಮತ್ತು ಕೆ.ವಿ.ಶ್ರೀನಾಥ್‌ಗೆ ಎರಡು ವರ್ಷದಿಂದ ಪರಿಚಯ ಇತ್ತು.
ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂಪಾಯಿಯ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಮಾಧವರಾವ್ ಶ್ರೀನಾಥ್‌ಗೆ ಒತ್ತಾಯ ಮಾಡುತ್ತಿದ್ದನಂತೆ. ಅಷ್ಟಲ್ಲದೇ ಮಾಧವ್ ರಾವ್ ಪತ್ನಿ ಜೊತೆ ಕೆ.ವಿ.ಶ್ರೀನಾಥ್‌ಗೆ ಅಕ್ರಮ ಸಂಬಂಧ ಇತ್ತಂತೆ. ಹೀಗಿರುವಾಗ ಮೇ 28ರಂದು ಬೆಳಗ್ಗೆ ಮಾಧವರಾವ್ ಮನೆಗೆ ಕೆ.ವಿ.ಶ್ರೀನಾಥ್ ಬಂದಿದ್ದಾನೆ.
ಇದೇ ವೇಳೆ ಮನೆಯಲ್ಲಿ ಇಬ್ಬರಿಗೂ ಹಣದ ವಿಚಾರಕ್ಕೆ ಗಲಾಟೆ ಆಗಿದೆ. ಬಳಿಕ ಮಾಧವರಾವ್ ಮನೆಯಲ್ಲಿದ್ದ ಜಾಕ್ ರಾಡ್ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದಾನೆ. ಹೀಗಾಗಿ ಶ್ರೀನಾಥ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ಮಾಧವರಾವ್ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿ, ಸಾಕ್ಷಿ ನಾಶ ಮಾಡಲು ಮೃತದೇಹವನ್ನ ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದಾನೆ.
ಆ ಬಳಿಕ ಮೊದಲು ಒಂದು ಬ್ಯಾಗ್, ನಂತರ ಎರಡು ಬ್ಯಾಗ್ಗಳಲ್ಲಿ ಮೃತದೇಹದ ತುಂಡುಗಳನ್ನು ಬೆಳತ್ತೂರು ಬಳಿಯ ಮೋರಿಯಲ್ಲಿ (ಪಿನಾಕಿನಿ ನದಿ) ಬಿಸಾಕಿದ್ದಾನೆ. ನಂತರ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಮಾದವರಾವ್ ಆಂಧ್ರ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಪ್ರಕರಣ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಏಕೆಂದರೆ ಕೊಲೆ ಮಾಡಿದ ಘಟನಾ ಸ್ಥಳ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.
ಈ ಸಂಬಂಧ ರಾಮಮೂರ್ತಿನಗರ ಪೊಲೀಸರು ಕೊಲೆ (302) ಮತ್ತು ಸಾಕ್ಷಿ ನಾಶ (201)ಅಡಿ ಕೇಸ್ ದಾಖಲಿಸಿಕೊಂಡು ಪೊಲೀಸರಿಂದ ಶ್ರೀನಾಥ್ ಮೃತದೇಹದ ತುಂಡುಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಕಳೆದ ಮೂರು ದಿನದಿಂದ ಪೊಲೀಸರು ಶ್ರೀನಾಥ್ ಮೃತದೇಹದ ತುಂಡಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದಕ್ಕಾಗಿ ಮಂಗಳೂರಿನಿಂದ ನುರಿತರನ್ನು ಕರೆಸಿದರೂ ಸಿಕ್ಕಿಲ್ಲ. ಮೋರಿಯಲ್ಲಿ ಮೃತದೇಹದ ತುಂಡುಗಳು ಕೊಚ್ಚಿಕೊಂಡು ಹೋಗಿವೆ ಅಂತ ಶಂಕಿಸಲಾಗಿದೆ.