ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ರಂಪಾಷಾ ಅವರನ್ನು ನೇಮಿಸಿ ಸರ್ಕಾರ ಗುರುವಾರ (ಜೂ.12) ಆದೇಶ ಹೊರಡಿಸಿದೆ.
ಇದೇ ಜೂನ್ 2ರ ಸೋಮವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಅದಾದ 10 ದಿನಗಳ ಅಂತರದಲ್ಲಿ ಮತ್ತೆ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದೆ.
ನೇಮಕಾತಿಗಾಗಿ ಕಾಯುತ್ತಿದ್ದ ಅಕ್ರಮ್ ಪಾಷ (ಕೆಎನ್: 2012), ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಅದರಂತೆ ಪ್ರಭಾರ ಎಂಡಿಯಾಗಿದ್ದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಅವರನ್ನು ಏಕಕಾಲಿಕ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಇನ್ನು ಪೋಸ್ಟಿಂಗ್‌ಗಾಗಿ ಕಾಯುತ್ತಿದ್ದ ಎಸ್.ಬಿ.ಶೆಟ್ಟೆಣ್ಣವರ್ (ಕೆಎನ್: 2008) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗೆ ನೇಮಿಸಿದೆ.
ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನ) ಆಗಿದ್ದ ರೋಹಿಣಿ ಸಿಂಧೂರಿ ದಾಸರಿ (ಕೆಎನ್: 2009) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಡಾ. ಎನ್.ವಿ.ಪ್ರಸಾದ್ ಅವರನ್ನು ಏಕಕಾಲಿಕ ಪ್ರಭಾರದಿಂದ ಬಿಡುಗಡೆ ಮಾಡಿದೆ.
ಇನ್ನು ಹಿಂದಿನ ಎಂಡಿ ಅನ್ಬುಕುಮಾರ್ ಅವರು ಸಾರಿಗೆ ನಿಗಮದಲ್ಲೇ ಉಳಿಯಬೇಕು ಎಂದು ಸರ್ಕಸ್ ಮಾಡಿದರು. ಆದರೆ, ಸಂಸ್ಥೆಯಲ್ಲಿ ಕೆಲ ಹಗರಣಗಳನ್ನು ಮಾಡಿದ್ದಾರೆ ಎಂದು ಕೆಆರ್‌ಎಸ್ ಪಕ್ಷದ ಮುಖಂಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ಅವರನ್ನು ಮತ್ತೆ ಮುಂದುರಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಹುದು ಎಂದು ಮುಂದಾಲೋಚಿಸಿದ ಸಿಎಂ ವರ್ಗಾವಣೆ ಮಾಡಿದ್ದರು.

ಇದಕ್ಕೂ ಮೊದಲು ಅಂದರೆ ಏಪ್ರಿಲ್ ತಿಂಗಳಿನಲ್ಲಿ ಅನ್ಬುಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ 1 ತಿಂಗಳ ಜಾಲ ರಜೆ ಮೇಲೆ ಸರ್ಕಾರ ಕಳುಹಿಸಿತ್ತು. ಬಳಿಕ ಜೂನ್ 2 ರಂದು ಅನ್ಬುಕುಮಾರ್ ಅವರನ್ನು ಹೌಸಿಂಗ್ ಡಿಪಾರ್ಟಮೆಂಟ್ ಸೆಕ್ರೆಟರಿ ಹಾಗೂ ವೆಟರ್ನರಿ ಸೈನ್ಸ್ ಆಂಡ್ ಫಿಷರಿಂಗ್ ಇಲಾಖೆಯ ಸೆಕ್ರೆಟರಿಯಾಗಿ ನೇಮಕಮಾಡಿ ವರ್ಗಾವಣೆ ಮಾಡಿತ್ತು.
ಜೂನ್ 2ರಂದು ಅನ್ಬುಕುಮಾರ್ ವರ್ಗಾವಣೆ ಆಗುತ್ತಿದ್ದಂತೆ ಬಿಎಂಟಿಸಿ ಎಂಡಿಗೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಪ್ರಭಾರ ನೀಡಿತ್ತು. ಇಂದು ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ರಂಪಾಷಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
Related

 










