NEWSನಮ್ಮಜಿಲ್ಲೆನಮ್ಮರಾಜ್ಯ

ನಾಳೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ಸರ್ಕಾರಿ ಬಸ್‌ಗಳ ಬದಲು ಖಾಸಗಿ ಬಸ್‌ಗಳ ಓಡಿಸಲು ಸಕಲ ಸಿದ್ಧತೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5ರಂದು ರಾಜ್ಯಾದ್ಯಾಂತ ಸರ್ಕಾರಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದ್ದರಿಂದ ಎಚ್ಚೆತ್ತುಕೊಂಡಿರುವ ಎಲ್ಲ ಜಿಲ್ಲೆಗಳ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸರ್ಕಾರಿ ಬಸ್‌ಗಳ ಬದಲು ಖಾಸಗಿ ಬಸ್‌ಗಳನ್ನು ಓಡಿಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿವೆ.

ಹೌದು, ಈ ಹಿಂದೆಯೂ ಸಹ ಸಾರಿಗೆ ನೌಕರರು ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ಈಗ ಮತ್ತೆ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಹೀಗಾಗಿ ಮುಷ್ಕರ ಬೇಡ ಅಂತ ಸಾರಿಗೆ ನೌಕರರ ಸಂಘಟನೆಗಳ ಜತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಆದ್ರೆ ಸಭೆಯಲ್ಲಿ ಸಿಎಂ ನಿರ್ಧಾರ ಏನು ಎಂಬ ಕೂತೂಹಲ ಮನೆ ಮಾಡಿದೆ. ಇನ್ನೂ ಸಂಘಟನೆಯ ಮುಖಂಡರು ಸಹ ಈ ಬಾರಿ ಜೋರಾಗಿಯೇ ಪ್ರತಿಭಟಿಸಿ ಹೋರಾಟ ಮಾಡೋಕೆ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

ಒಂದು ವೇಳೆ ಮಂಗಳವಾರ ಮುಷ್ಕರ ಆರಂಭವಾದರೆ ಸಹಜವಾಗಿಯೇ ಸಾರ್ವಜನಿಕರಿಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಎಚ್ಚೆತ್ತಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಂದು ಸಾರಿಗೆ ಬಸ್‌ಗಳ ಬದಲಾಗಿ ಖಾಸಗಿ ವಾಹನಗಳನ್ನ ರಸ್ತೆಗಿಳಿಸೋಕೆ ಪ್ಲಾನ್ ಮಾಡಿದೆ.

ಈ ಜಿಲ್ಲೆಯಲ್ಲಿ ಪ್ರತಿನಿತ್ಯ 584 ಬಸ್‌ಗಳು ಸಂಚಾರ ಮಾಡುತ್ತಿದ್ದು, 3400ಕ್ಕೂ ಹೆಚ್ಚು ಟ್ರಿಪ್‌ಗಳಾಗುತ್ತಿದೆ. ಹೀಗಾಗಿ ಸಾವಿರಾರು ಮಂದಿ ಈ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಮುಷ್ಕರ ನಡೆದರೆ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಮುಂದಾಲೋಚನೆ ಮಾಡಿರುವ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಈಗಾಗಲೇ ಖಾಸಗಿ ವಾಹನಗಳ ಮಾಲೀಕರ ಜತೆ ಸಭೆ ನಡೆಸಿದ್ದು ಖಾಸಗಿ ಬಸ್‌ಗಳನ್ನು ಓಡಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನು ಜಿಲ್ಲೆಯಲ್ಲಿರುವ 200ಕ್ಕೂ ಹೆಚ್ಚು ಸ್ಟೇಜ್ ಹಾಗೂ ಕಂಟ್ರ‍್ಯಾಕ್ಟ್ ಕ್ಯಾರೇಜ್ ಖಾಸಗಿ ಬಸ್‌ಗಳನ್ನು ರಸ್ತೆಗಿಳಿಯಲಿವೆಯಂತೆ. ಇದರ ಜತೆಗೆ ಜಿಲ್ಲೆಯಲ್ಲಿರುವ 587 ಶಾಲಾ ಬಸ್‌ಗಳನ್ನು ಬಳಸಿಕೊಳ್ಳಲು ಶಾಲೆಗಳ ಮಾಲೀಕರು ಜತೆ ಸಮಾಲೋಚನೆ ಮಾಡಿದ್ದಾರೆ. ಮತ್ತೊಂದು ಕಡೆ ಸ್ಥಳೀಯವಾಗಿ ಆಟೋಗಳನ್ನು ಸಹ ಬಳಸಿಕೊಳ್ಳೋಕೆ ನಿರ್ಧಾರ ಮಾಡಲಾಗಿದೆ.

ಚಾಮರಾಜನಗರದಲ್ಲೂ ಇದೇ ಸಿದ್ಧತೆ: ಸಾರಿಗೆ ನೌಕರರ ಮುಷ್ಕರಕ್ಕೆ ಪ್ಲ್ಯಾನ್ ಹಿನ್ನೆಲೆಯಲ್ಲಿ ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್, ಆಟೋ ಸೇರಿದಂತೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜನರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲೂ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಸಂಬಂಧ ಅಧಿಕಾರಿಗಳಿಗೂ ಕೂಡ ಸೂಚಿಸಲಾಗಿದೆ. ಲಭ್ಯವಿರುವ ಎಲ್ಲ ಕಡೆಯೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲೂ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾಹಿತಿ ನೀಡಿದ್ದಾರೆ.

ಇತ್ತ ರಾಯಚೂರು ಜಿಲ್ಲಾಡಳಿತದಿಂದ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ರಾಯಚೂರಿನಲ್ಲಿ ಖಾಸಗಿ ಹಾಗೂ ಶಾಲಾ ಬಸ್‌ಗಳ ಬಳಕೆಗೆ ಜಿಲ್ಲಾಡಳಿತ ಮುಂದಾಗಿದೆ. ಸೋಮವಾರ ಸಭೆ ಕರೆದಿರುವ ಜಿಲ್ಲಾಡಳಿತ, ಸಭೆಯಲ್ಲಿ ಖಾಸಗಿ ವಾಹನಗಳ ಬಳಕೆ ಹಾಗೂ ದರ ನಿಗದಿ ಬಗ್ಗೆ ಚರ್ಚೆ ಮಾಡಲಿದೆ.

373 ಶಾಲಾ ಬಸ್, 60 ಮಿನಿ ಬಸ್ ಸೇರಿ ಒಟ್ಟು 738 ವಾಹನಗಳನ್ನ ಗುರುತಿಸಿರುವ ಜಿಲ್ಲಾಡಳಿತ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ವಾಹನಗಳ ಬಳಕೆಗೆ ಜಿಲ್ಲಾಡಳಿತ ಮುಂದಾಗಿದೆ. ಇನ್ನೂ ಖಾಸಗಿ ಚಾಲಕರು ಹಾಗೂ ಸಾರಿಗೆ ಇಲಾಖೆ ಟ್ರೈನಿ ಚಾಲಕರ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಅಂತಾರಾಜ್ಯ ಪ್ರಯಾಣಕ್ಕಾಗಿ ಆಂಧ್ರಪ್ರದೇಶದಿಂದ ಹೆಚ್ಚುವರಿ ಬಸ್ ಓಡಾಟಕ್ಕೆ ಕರ್ನೂಲ್ ಜಿಲ್ಲಾಡಳಿತ ಜತೆ ಚರ್ಚಿಸಲಾಗಿದೆ.

ಒಟ್ಟಿನಲ್ಲಿ ಸಿಎಂ ಸಭೆಯ ನಂತರವಷ್ಟೇ ಮುಷ್ಕರ ರದ್ದಾಗುತ್ತಾ, ಇಲ್ಲ ಆರಂಭವಾಗುತ್ತಾ ಅನ್ನೋ ನಿರ್ಧಾರ ಹೊರಬರಬೇಕಿದೆ. ಆದ್ರೂ ಒಂದು ವೇಳೆ ಮುಷ್ಕರ ಆರಂಭವೇ ಆದರೆ ಖಾಸಗಿ ಬಸ್‌ಗಳ ಮೂಲಕವೇ ಸಾರ್ವಜನಿಕರಿಗೆ ಸಂಪೂರ್ಣ ಸೇವೆ ಒದಗಿಸೋದು ಕಷ್ಟ ಸಾಧ್ಯವಾಗಬಹುದು ಎಂದು ಹೇಳಲಾಗುತ್ತಿದೆ.

Megha
the authorMegha

Leave a Reply

error: Content is protected !!