ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ವರುಣ ಅಬ್ಬರಿಸಲಿದ್ದು ಜನರು ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಅಂದರೆ ಜುಲೈ 4ರಿಂದ ಜುಲೈ 7ರವೆರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಈಗಾಗಲೇ ಜೋರು ಮಳೆಯಾಗಿತ್ತಿದೆ. ಹೀಗಾಗಿ ಕೆಲ ಭಾಗಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಗೆ ಜುಲೈ 7ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಜುಲೈ 7ರವರೆಗೆ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಇನ್ನು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂಜಾಗೃತ ಕ್ರಮವಾಗಿ ಕೆಲವು ಭಾಗಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಬೈಂದೂರು ಶಿಕ್ಷಣ ವಲಯ ವ್ಯಾಪ್ತಿಗೆ ರಜೆ ಘೋಷಣೆ ಮಾಡಲಾಗಿದೆ. ಒಂದರಿಂದ ಹತ್ತನೇ ತರಗತಿವರೆಗೆ ರಜೆ ನೀಡಲಾಗಿದೆ.
ಆದರೆ, ಬೈಂದೂರು ತಾಲೂಕಿಗೆ ರಜೆ ಇಲ್ಲ. ಬೈಂದೂರು ವಲಯಕ್ಕೆ ಮಾತ್ರ ರಜೆ ನೀಡಿದ್ದೇವೆ. ಭೌಗೋಳಿಕವಾಗಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗುವ ಅಪಾಯ ಇರೋದ್ರಿಂದ ರಜೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾಹಿತಿ ನೀಡಿದ್ದಾರೆ.
ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಲ್ಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗೆಯೇ, ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕೆಲ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ವನ್ಯಜೀವಿ ವಲಯದ ವ್ಯಾಪ್ತಿಗೆ ಬರೋ ಪ್ರವಾಸಿ ಸ್ಥಳಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಬೆಟ್ಟಗಳು-ಜಲಪಾತಗಳ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು (ನರಸಿಂಹಗಡ)ಬೆಟ್ಟ, ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಫಾಲ್ಸ್ಗಳ ವೀಕ್ಷಣೆಗೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇನ್ನು ಅಸ್ಸಾಂನಲ್ಲಿ ಮಳೆ ಅವಾಂತರ ಜೋರಾಗಿದೆ. 19 ಜಿಲ್ಲೆಗಳಲ್ಲಿ 6 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಪ್ರವಾಹಕ್ಕೆ ಸಿಲುಕಿ 38 ಜನರು ಸಾವನ್ನಪ್ಪಿದ್ದಾರೆ. ಜನಜೀವನ ಅಸ್ತವ್ಯಕ್ತವಾಗಿದೆ.