ಬೆಂಗಳೂರು: ನಾಳೆ ನಡೆಯಲಿರುವ ನೈರುತ್ಯ ರೈಲ್ವೆಯ ಸಹಾಯಕ ಲೋಕೋ ಪೈಲೆಟ್ ಹುದ್ದೆಗಳಿಗೆ ನಡೆಯುವ ಪರೀಕ್ಷೆಯಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಮಾತ್ರ ಅವಕಾಶ ನೀಡಿದ್ದು ಕನ್ನಡ ಭಾಷೆ ಆಯ್ಕೆಗೆ ಅವಕಾಶ ನೀಡದಿರುವುದು ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿರುವಂತಹ ಅಪಮಾನ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.
ಅಲ್ಲದೆ ಈ ಕೂಡಲೇ ಕನ್ನಡದಲ್ಲಿಯೂ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಿ ಕೊಡಬೇಕೆಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆಯುವ ಮೂಲಕ ಅಗ್ರಹಿಸಿದ್ದಾರೆ.
ಇದೇ ಹುದ್ದೆಗಳಿಗೆ ಮೇನಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಕನ್ನಡ ಭಾಷೆಗೂ ಸಹ ಅವಕಾಶವಿತ್ತು. ಈಗ ಹಿಂದಿ, ಇಂಗ್ಲಿಷ್ ಜತೆಗೆ ತಮಿಳು ಭಾಷೆಗೆ ಮಾತ್ರ ಅವಕಾಶ ನೀಡಿ ಕನ್ನಡ ಭಾಷೆಯನ್ನು ಕೈ ಬಿಟ್ಟಿರುವುದು ನಿಜಕ್ಕೂ ದುರಂತ. ಇದರಿಂದ ಎರಡು ತಿಂಗಳುಗಳಿಂದ ಕನ್ನಡ ಭಾಷೆಯಲ್ಲಿ ಅಭ್ಯಸಿಸಿ ಸಿದ್ಧತೆ ಮಾಡಿಕೊಂಡಿರುವ ಲಕ್ಷಾಂತರ ಅಭ್ಯರ್ಥಿಗಳು ಹತಾಶೆಯ ಸ್ಥಿತಿಯಲ್ಲಿದ್ದಾರೆ ಈ ಕೂಡಲೇ ರೈಲ್ವೆ ಖಾತೆ ಸಚಿವರು ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕೆಎಎಸ್ ಹುದ್ದೆಗೆ ನಡೆಯಲಿರುವ ಪರೀಕ್ಷಾ ದಿನಾಂಕ ಬದಲಿಸಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ಇದೇ ತಿಂಗಳ ಆ.25ರಂದು ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಅದರಂತೆ ಕೇಂದ್ರ ಸರ್ಕಾರದ ಐಬಿಪಿಎಸ್ ಬ್ಯಾಂಕ್ ಕ್ಲರ್ಕ್ ಗಳ ಹುದ್ದೆಗಳಿಗಾಗಿ ಇದೇ ಆಗಸ್ಟ್ 24ರಂದು ಪರೀಕ್ಷೆ ನಿಗದಿಯಾಗಿದೆ. ಇದರಿಂದ ಈ ಎರಡೂ ಹುದ್ದೆಗಳಿಗೆ ಅಭ್ಯಾಸ ಮಾಡುತ್ತಿರುವ ಲಕ್ಷಾಂತರ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಲಿದ್ದು, ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಕೆಎಎಸ್ ಪರೀಕ್ಷಾ ದಿನಾಂಕವನ್ನು ಮುಂದೂಡಬೇಕೆಂದು ಒತ್ತಾಯಿಸಿದ್ದಾರೆ.
ಇದಲ್ಲದೆ ಪರೀಕ್ಷಾ ದಿನಾಂಕದಂದು ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸುವ ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ಹಾಗೂ ರೈಲ್ವೆ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಸಹ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.