NEWSನಮ್ಮರಾಜ್ಯ

ಎಐಟಿಯುಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನಂತ ಸುಬ್ಬರಾವ್ ರಾಜೀನಾಮೆ- ಪ್ರೊ. ಬಾಬು ಮ್ಯಾಥ್ಯೂ ನೂತನ ಸಾರಥಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಈವರೆಗೂ ರಾಜ್ಯಾಧ್ಯಕ್ಷರಾಗಿದ್ದ ಕಾರ್ಮಿಕ ನೇತಾರ ಕಾಂ.ಎಚ್.ವಿ.ಅನಂತ ಸುಬ್ಬರಾವ್ ಅವರು ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಎಐಟಿಯುಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರೊ.ಬಾಬು ಮ್ಯಾಥ್ಯೂ ಅವರನ್ನು ಆಯ್ಕೆ ಮಾಡಲಾಗಿದೆ.

ಮಂಗಳವಾರ (ಡಿ.16) ಬೆಂಗಳೂರಿನಲ್ಲಿ ಜರುಗಿದ ಎಐಟಿಯುಸಿ ರಾಜ್ಯ ಸಮಿತಿ ಸಭೆಯಲ್ಲಿ ಬಾಬು ಮ್ಯಾಥ್ಯೂ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರೊ. ಬಾಬು ಮ್ಯಾಥ್ಯೂ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಕಾರ್ಮಿಕ ಚಳುವಳಿಯಲ್ಲಿ ಅವಿರತವಾಗಿ ತೊಡಗಿಸಿಕೊಂಡು ಮುನ್ನಡೆಸಿರುವ ಅಪಾರ ಅನುಭವ ಹೊಂದಿರುವ ಪ್ರೊ. ಬಾಬು ಮ್ಯಾಥ್ಯೂ ಅವರ ಮಾರ್ಗದರ್ಶನ ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ ಎಂದು ಸಭೆಯು ಅಭಿಪ್ರಾಯಪಟ್ಟಿತು.

ಇನ್ನು ಇಂದಿನ ಸಭೆಗೆ ಮಾರ್ಗದರ್ಶಕರಾಗಿ ದೆಹಲಿಯಿಂದ ಆಗಮಿಸಿದ್ದ ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಂ. ಅಮರ್ಜಿತ್ ಕೌರ್ ಮಾತನಾಡಿ, ಅನಂತ ಸುಬ್ಬರಾವ್ ಅವರು ಸಂಘಟನೆಯ ನಾಯಕರಾಗಿ ಸಲ್ಲಿಸಿರುವ ಸುದೀರ್ಘ ಸೇವೆಯನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಪ್ರೊ. ಬಾಬು ಅವರ ಅಪಾರ ಅನುಭವ ಹಾಗೂ ಆಳವಾದ ಅಧ್ಯಯನ ರಾಜ್ಯದ ಕಾರ್ಮಿಕ ವರ್ಗಕ್ಕೆ ಹೊಸ ದಿಕ್ಕನ್ನು ತೋರಿಸುವ ಭರವಸೆ ಇದೆ ಎಂದು ಹೇಳಿದರು.

ನೂತನ ಅಧ್ಯಕ್ಷರಾದ ಪ್ರೊ. ಬಾಬು ಮ್ಯಾಥ್ಯೂ ಅವರ ಮಾರ್ಗದರ್ಶನದಲ್ಲಿ ಎಐಟಿಯುಸಿ ರಾಜ್ಯ ಸಮಿತಿ ಮಾತ್ರವಲ್ಲದೆ ಕಾರ್ಮಿಕ ಚಳುವಳಿಯು ಸಹ ಬಲಗೊಳ್ಳಲಿದೆ ಎಂದು ಕಾಂ.ಅನಂತಸುಬ್ಬರಾವ್ ಹೇಳಿದರು.

ಪ್ರೊ. ಬಾಬು ಮ್ಯಾಥ್ಯೂ ಅವರ ಬಗ್ಗೆ: ಪ್ರೊ. ಬಾಬು ಮ್ಯಾಥ್ಯೂ ಅವರು ದುಡಿಯುವ ವರ್ಗದ ಪರವಾದ ಸಿದ್ಧಾಂತದ ಪ್ರತಿಪಾದಕರಾಗಿದ್ದು. 1970-80ರ ದಶಕಗಳಲ್ಲಿ ಎಐಟಿಯುಸಿ ನಾಯಕರಾಗಿ ಕಾರ್ಮಿಕ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರೊ.ಬಾಬು ಮಾಥ್ಯ ಎಲ್ಲ ರಂಗಗಳ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವುದು ಮಾತ್ರವಲ್ಲದೆ, ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಜತೆ ಉತ್ತಮ ಒಡನಾಟ ಹಾಗೂ ಬಾಂಧವ್ಯವನ್ನು ಹೊಂದಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಮ್ಯಾಥ್ಯೂ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯ, ಯೂನಿವರ್ಸಿಟಿ ಬೆಂಗಳೂರು ಮತ್ತು ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಅಪಾರ ಅನುಭವವನ್ನು ಹೊಂದಿದ್ದಾರೆ.

Megha
the authorMegha

Leave a Reply

error: Content is protected !!