ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಘಟನರಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿ ಹಾಗೂ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ರಾಜ್ಯ ಘಟಕದ ಮಾಜಿ ಅಧ್ಯಕ್ಷರಾಗಿದ್ದ ಅನಂತ ಸುಬ್ಬರಾವ್ ಅವರಿಂದು ನಿಧನರಾಗಿದ್ದಾರೆ. ಹೀಗಾಗಿ ನಾಳೆ (ಜ.29) ಕರೆ ಕೊಟ್ಟಿದ್ದ ಸಾರಿಗೆ ನೌಕರರ ಬೆಂಗಳೂರು ಚಲೋವನ್ನು ಮುಂದೂಡಲಾಗಿದೆ.

ಗುರುವಾರ ಕರೆ ಕೊಟ್ಟಿದ್ದ ಸಾರಿಗೆ ನೌಕರರ ಒಂದು ದಿನದ ಪ್ರತಿಭಟನೆಯ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಸಿದ್ಧತೆಯಲ್ಲಿದ್ದಾಗ ಕುಸಿದುಬಿದ್ದು ನಿಧನರಾಗಿದ್ದಾರೆ. ವಿಜಯನಗರದಲ್ಲಿರುವ ತನ್ನ ಮನೆಯಲ್ಲಿ ಬುಧವಾರ (ಜ.28) ಸಂಜೆ ಸುಮಾರು 6 ಗಂಟೆಯ ಹೊತ್ತಿಗೆ ಸ್ನಾನ ಮಾಡಿ ಬಂದವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಈ ವೇಳೆ ವಿಜಯಭಾಸ್ಕರ್ ಮತ್ತು ಅನಂತ ಸುಬ್ಬರಾವ್ ಅವರ ಮೊಮ್ಮಗಳು ವೈದ್ಯರಿಗೆ ಕರೆ ಮಾಡಿದಾಗ ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚನೆ ನೀಡಿದ್ದರು. ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರೂ ಆಗಿದ್ದ ಅವರು 4 ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಜ.29 ರಂದು ಬೆಂಗಳೂರು ಚಲೋಗೇ ಕರೆ ನೀಡಿದ್ದರು. ಈ ಬಗ್ಗೆ ಬುಧವಾರವೂ ವಿವಿಧ ಸಾರಿಗೆ ಸಂಘಟನೆಗಳ ನಾಯಕರೊಂದಿಗೆ ಚರ್ಚಿಸಿದ್ದರು. ಸಂಜೆ ಶೇಷಾದ್ರಿಪುರ ರಸ್ತೆಯಲ್ಲಿರುವ ಸಂಘಟನೆಯ ಕಚೇರಿಯಲ್ಲಿ ಎಲ್ಲರೂ ಸೇರಿ ಮತ್ತೊಂದು ಸುತ್ತಿನ ಚರ್ಚೆ ನಡೆಸಲು ನಿರ್ಧರಿಸಿದ್ದರು. ಸಭೆಗೆ ತೆರಳುವ ಮುನ್ನವೇ ಉಸಿರಾಟದ ಸಮಸ್ಯೆ ಉಂಟಾಗಿತ್ತು.
ಹಾಸನ ಜಿಲ್ಲೆಯ ಅರಕಲಗೂಡು ಮೂಲದವರಾದ ಅನಂತ ಸುಬ್ಬಾರಾವ್ ಅವರು, ಆರಂಭದ ದಿನಗಳಲ್ಲಿ ಟ್ರೇಡ್ ಯೂನಿಯನ್‌ಗಳ ಬಣ ನಾಯಕರಾಗಿ ಹೆಸರುವಾಸಿಯಾಗಿದ್ರು. ಬಳಿಕ ಎಐಟಿಯುಸಿಯ ಮೂಲಕ ಬೆಳೆದು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ರು. ಕಳೆದ 45 ವರ್ಷಗಳಿಂದ ಕಾರ್ಮಿಕ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದ ಅನಂತ ಸುಬ್ಬರಾವ್ ಅವರು ಸಾರಿಗೆ ನೌಕರರ ಪರ ಹೋರಾಟ ಮಾಡಿಕೊಂಡು ಬಂದಿದ್ದರು. ಕಾರ್ಮಿಕ ಮುಖಂಡರಾಗಿ ಅನೇಕ ಚಳವಳಿ, ಹೋರಾಟವನ್ನು ಸಂಘಟಿಸಿದ್ದರು.
ದೇಹ- ನೇತ್ರದಾನ: ಇಂದು ಸಂಜೆ ನಿಧನರಾದ ಅನಂತ ಸುಬ್ಬರಾವ್ ಅವರ ನೇರ್ರಗಳನ್ನು ದಾನಮಾಡಲು ಕುಂಟುಬದವರು ಮುಂದಾಗಿದ್ದಾರೆ. ಅಲ್ಲದೆ ಮೃತದೇಹವನ್ನು ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನಮಾಡುವುದಾಗಿಯೂ ಕುಟುಂಬದ ಮೂಲಗಳು ತಿಳಿಸಿವೆ.
Related










