ಬೆಂಗಳೂರು: ಕರ್ನಾಟಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನಿಸಲಾಗಿದೆ. ಹೀಗಾಗಿ ಹುದ್ದೆ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ, ಪ್ರಮುಖ ದಿನಾಂಕ, ಈಗ ಪ್ರಕಟಿಸಲಾದ ಪ್ರಮುಖ ಸೂಚನೆಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.
ಮೊದಲನೆಯದಾಗಿ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 03 ರವರೆಗೆ ಅರ್ಜಿ ಸಲ್ಲಿಸಲು ಕಾಲವಕಾಶ ನೀಡಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೆನೆನಿ 2024, ದಿನಾಂಕ:10.09.2024ರ ಪ್ರಕಾರ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 3 ವರ್ಷ ವಯಸ್ಸಿನ ಸಡಿಲಿಕೆ ನೀಡಬೇಕು ಎನ್ನುವ ಕಾರಣದಿಂದ, ಇದೀಗ ಕರ್ನಾಟಕ ಲೋಕಸೇವಾ ಆಯೋಗವು ಪಿಡಿಒ ಹುದ್ದೆಗಳಿಗೂ ಮತ್ತೆ ಅರ್ಜಿ ಸ್ವೀಕಾರ ಮಾಡುವ ಸಂಬಂಧ ಪ್ರಕಟಣೆ ಹೊರಡಿಸಿದೆ.
ಅಲ್ಲದೇ ಅರ್ಜಿ ಸಲ್ಲಿಸಲು ದಿನಾಂಕಗಳು, ಇತರೆ ವಿಶೇಷ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಆಯೋಗವು 2023-24ನೇ ಸಾಲಿನ ಗ್ರೂಪ್-ಸಿ ವೃಂದದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ “ಪಂಚಾಯತಿ ಅಭಿವೃದ್ಧಿ ಅಧಿಕಾರಿ” ಉಳಿಕೆ ಮೂಲ ವೃಂದದ 150 ಹುದ್ದೆಗಳು ಹಾಗೂ ಹೈದರಾಬಾದ್ ಕರ್ನಾಟಕ ವೃಂದದ 97 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈಗ ವಯಸ್ಸಿನ ಸಡಿಲಿಕೆಯ ಪ್ರಕಾರ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಲಾಗಿದೆ.
ಈ ಹಿಂದಿನ ಅಧಿಸೂಚನೆಯಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿಯನ್ನು “ಸಾಮಾನ್ಯ ಅರ್ಹತೆ-35 ವರ್ಷಗಳು, ಪವರ್ಗ 2ಎ, 2ಬಿ, 3ಎ ಮತ್ತು 3ಬಿ- 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- 40 ವರ್ಷಗಳು” ಎಂದು ನಿಗದಿಪಡಿಸಲಾಗಿತ್ತು. ಆದರೆ ಮತ್ತೆ ಸೆ.10ರಂದು ಹೊರಡಿಸಿರುವ ಆದೇಶ ಪ್ರಕಾರ ವಯಸ್ಸಿನ ಅರ್ಹತೆಗಳನ್ನು ಸಡಿಲಿಸಲಾಗಿದೆ.
ಪ್ರಸ್ತುತ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೆನೆನಿ 2024, ದಿನಾಂಕ:10.09.2024ರಲ್ಲಿ, ಈ ಆದೇಶ ಹೊರಡಿಸಲಾಗಿದ್ದು, “ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ, ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದೆ.”
ಈ ಮೇಲಿನ ಸರ್ಕಾರದ ಆದೇಶದನ್ವಯ ಸದರಿ ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದ, ವಯೋಮಿತಿಯನ್ನು ಈ ಕೆಳಗಿನಂತೆ ಮಾರ್ಪಾಡು ಮಾಡಲಾಗಿದೆ.
ಪಿಡಿಒ ಹುದ್ದೆಗೆ ಅರ್ಜಿ ಹಾಕಲು ವಯೋಮಿತಿ ಅರ್ಹತೆಗಳು: ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 03.10.2024ಕ್ಕೆ ಕೆಳಗಿನಂತೆ ಆಯಾ ಮೀಸಲಾತಿಗಳ ಮುಂದೆ ನಮೂದಿಸಿರುವ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಮ ವಯೋಮಿತಿಯನ್ನು ಮೀರಿರಬಾರದು.
1)ಅರ್ಜಿ ಸಲ್ಲಿಸಲು ಕನಿಷ್ಠ-18 ವರ್ಷಗಳು. 2) ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಯವರಿಗೆ ಗರಿಷ್ಠ 38 ವರ್ಷಗಳು. 3) ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅರ್ಹತೆಯವರಿಗೆ ಗರಿಷ್ಠ 41 ವರ್ಷಗಳು. 4) ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- ಅರ್ಹತೆಯವರಿಗೆ ಗರಿಷ್ಠ 43 ವರ್ಷಗಳು.
ಸರ್ಕಾರದ ಈ ಆದೇಶದ ಹಿನ್ನೆಲೆಯಲ್ಲಿ ಗ್ರೂಪ್-ಸಿ ವೃಂದದ “ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕಳಗಿನ ದಿನಾಂಕಗಳನ್ನು ನಿಗದಿ ಮಾಡಲಾಗಿದೆ.
ಪ್ರಮುಖ ದಿನಾಂಕಗಳು: ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 18.09.2024- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03.10.2024 ರವರೆಗೆ. ಇನ್ನು ಶೈಕ್ಷಣಿಕ ಅರ್ಹತೆ: ಪಿಡಿಒ ಹುದ್ದೆಗಳಿಗೆ ಯಾವುದೇ ಪದವಿ ಪಾಸಾದವರು – ತತ್ಸಮಾನ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ.
ಇತರೆ ವಿಶೇಷ ಸೂಚನೆಗಳು: 1) ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. 2) ವಯೋಮಿತಿಯನ್ನು ಹೊರತುಪಡಿಸಿ ಉಳಿದಂತೆ, ಆಯೋಗದ ಹಿಂದಿನ ಅಧಿಸೂಚನೆಯಲ್ಲಿನ ಇತರೆ ಮಾಹಿತಿ/ವಿವರಗಳನ್ನು ಯಥಾವತ್ತಾಗಿ ಅನ್ವಯಿಸಿಕೊಳ್ಳತಕ್ಕದ್ದು ಹಾಗೂ ಹೆಚ್ಚಿನ ವಿವರಗಳಿಗಾಗಿ ಈ ಅಧಿಸೂಚನೆಯನ್ನು ಓದಿಕೊಳ್ಳಬೇಕು. 3) ಈಗಾಗಲೇ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ: ಕೆಪಿಎಸ್‌ಸಿ ವೆಬ್‌ವಿಳಾಸ https://www.kpsc.kar.nic.in/ ಕ್ಕೆ ಭೇಟಿ ನೀಡಿ. ಕೆಪಿಎಸ್‌ಸಿ ಮುಖಪುಟದಲ್ಲಿ ಸ್ಕ್ರಾಲ್ ಡೌನ್ ಮಾಡಿ. ‘Apply Online For Various Notification’ ಎಂದಿರುವಲ್ಲಿ ಕ್ಲಿಕ್ ಮಾಡಿ. ಆಯೋಗದ ಮತ್ತೊಂದು ವೆಬ್‌ಪೇಜ್ ತೆರೆಯುತ್ತದೆ. ಇಲ್ಲಿ ಇತ್ತೀಚೆಗೆ ಯಾವೆಲ್ಲ ಹುದ್ದೆಗೆ ಅರ್ಜಿ ಸ್ವೀಕರಿಸಲಾಗುತ್ತಿದೆಯೋ ಆ ಎಲ್ಲ ಹುದ್ದೆಗೆ ಅರ್ಜಿ ಲಿಂಕ್ ಇರುತ್ತದೆ.
ಇಲ್ಲಿ ‘ PANCHAYAT DEVELOPMENT OFFICER IN RDPR DEPARTMENT (RPC or HK)’ ಆಯ್ಕೆ ಮಾಡಿ ಕ್ಲಿಕ್ ಮಾಡಿ. ಹೊಸ ವೆಬ್‌ಪೇಜ್ ತೆರೆಯುತ್ತದೆ. ಇಲ್ಲಿ ‘Login’ ಮೆನು ಕೆಳಗಡೆ ‘New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ. ಕೇಳಲಾದ ಪ್ರಾಥಮಿಕ ಮಾಹಿತಿಗಳನ್ನು ನೀಡಿ ರಿಜಿಸ್ಟ್ರೇಷನ್ ಪಡೆದು ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿ.
ನಂತರ ಮತ್ತೆ ಲಾಗಿನ್ ಆಗುವ ಮೂಲಕ ಹುದ್ದೆ ಆಯ್ಕೆ ಮಾಡಿ, ಅರ್ಜಿ ಸಲ್ಲಿಸಬೇಕು. ವಿದ್ಯಾರ್ಹತೆ, ವೈಯಕ್ತಿಕ ವಿವರಗಳನ್ನು ನಮೂದಿಸಿ, ಕೇಳಲಾದ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್‌ಲೋಡ್ ಮಾಡುವುದು ಕಡ್ಡಾಯ.
ಅರ್ಜಿ ಶುಲ್ಕ ವಿವರ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600. ಇತರೆ ಹಿಂದುಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ರೂ.300. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಮತ್ತಷ್ಟು ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ: PDO ಗೆ ಅರ್ಜಿ ಪ್ರಾರಂಭ.!!