ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ 2012ರ ಪೋಕ್ಸೋ ಕಾಯ್ದೆ ಅನ್ವಯ ಸಂತ್ರಸ್ತ ಮಕ್ಕಳಿಗೆ ಬೆಂಬಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನೀತಾಲಕ್ಷ್ಮೀ ತಿಳಿಸಿದ್ದಾರೆ.
ಅಭ್ಯರ್ಥಿಗಳು ಮಕ್ಕಳೊಂದಿಗೆ ಕೆಲಸ ಮಾಡುವಲ್ಲಿ ಕನಿಷ್ಠ 3 ವರ್ಷಗಳ ಅನುಭವದೊಂದಿಗೆ ಸಮಾಜ ಕಾರ್ಯ ವಿಷಯದಲ್ಲಿ ಪದವಿ ಹೊಂದಿರಬೇಕು. ಪ್ರತಿ ಪ್ರಕರಣಕ್ಕೆ ರೂ.3000 (ರೂಪಾಯಿ ಮೂರು ಸಾವಿರ) ಸಂಭಾವನೆ ನಿಗದಿಗೊಳಿಸಲಾಗಿದೆ.
ಮಕ್ಕಳ ಆರೈಕೆ ಕೇಂದ್ರದಲ್ಲಿ ಮಕ್ಕಳೊಂದಿಗೆ ಕೆಲಸ ಮಾಡುವ ಅಧಿಕಾರಿಗಳು ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾವುದೇ ಸಂಸ್ಥೆ ಕೂಡ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕ್ಷೇತ್ರ ಕಾರ್ಯವನ್ನು ಮಾಡಲು ಮತ್ತು ಅಪರಾಧ ನ್ಯಾಯ ವ್ಯವಸ್ಥೆಯ ಮೂಲಕ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇದೇ ಅಕ್ಟೋಬರ್ 24 ರಂದು ಸಂಜೆ 5:30ರ ಒಳಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನೀತಾಲಕ್ಷ್ಮೀ ತಿಳಿಸಿದ್ದಾರೆ.