ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ
ಬೆಂಗಳೂರು: ಫೆಂಗಲ್ ಚಂಡಮಾರುತ ತಮಿಳುನಾಡು ಹಾಗೂ ಪುದುಚೇರಿ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದು ದಾಖಲೆಯ ಮಳೆ ಸುರಿಸುತ್ತಿದೆ. ಫೆಂಗಲ್ ಅಬ್ಬರಕ್ಕೆ ಜನಜೀವನ ಅಕ್ಷರಶಃ ತತ್ತರಿಸಿವೆ. ರಸ್ತೆಗಳು ಜಲಾವೃತವಾಗಿವೆ. ರೈಲ್ವೇ ಹಳಿಗಳು ಮುಳುಗಿವೆ. ವಿಮಾನ ಸಂಚಾರ ವ್ಯತ್ಯಯವಾಗಿದೆ. ತಗ್ಗುಪ್ರದೇಶದ ಮನೆಗಳು ಮುಳುಗಿದ್ದು ಜನ ಪರದಾಡುವಂತಾಗಿದೆ. ಮಳೆ ಸಂಬಂಧ ಮೂವರು ಮೃತಪಟ್ಟಿದ್ದಾರೆ.
ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ದಾಖಲೆಯ ಮಳೆಯ ಪ್ರಮಾಣ 450 ಮಿಮೀ ದಾಟಿದೆ. ಪಾಂಡಿಚೇರಿ, ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ತಿರುವಣ್ಣಾಮಲೈ, ತಿರುವಳ್ಳುರ್, ಕಾಂಚೀಪುರಂ, ಕೂಡ್ಲೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಚೆನ್ನೈನ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ತಗ್ಗುಪ್ರದೇಶಗಳ ಮನೆಗಳು, ಕಟ್ಟಡಗಳು ಸಂಪೂರ್ಣವಾಗಿ ಮುಳುಗಿವೆ. ನಿವಾಸಿಗಳು ಸರಕು, ಸರಂಜಾಮುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಮತ್ತೊಂದೆಡೆ ಮಳೆ ನೀರಲ್ಲಿ ಮೃತದೇಹವೊಂದು ತೇಲಿಬಂದಿದ್ದನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.
ಕಳೆದ 24 ಗಂಟೆಯಲ್ಲಿ ಭರ್ಜರಿ ಮಳೆ: ಅತ್ತ ಪಕ್ಕದ ಪಾಂಡಿಚೇರಿ ಬಹುತೇಕ ಮುಳುಗಡೆಯಾಗಿದೆ. ಕಳೆದ 24 ಗಂಟೆಗಳಲ್ಲಿ 48.4 ಸೆಂಟಿ ಮೀಟರ್ ಮಳೆಯಾಗಿದ್ದು ಕಳೆದ 30 ವರ್ಷಗಳ ಬಳಿಕ ಇಷ್ಟು ದೊಡ್ಡ ಪ್ರಮಾಣದ ಮಳೆ ಸುರಿದಿದೆ. ಜನವಸತಿ ಪ್ರದೇಶಗಳು ಮಳೆಯಿಂದ ತೊಯ್ದು ಹೋಗಿವೆ.
ರೈನ್ಬೌ ನಗರದ ಬಹುತೇಕ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಮೊಳಕಾಲುದ್ದ ನಿಂತಿರುವ ಮಳೆ ನೀರಿನಲ್ಲೇ ಸಾರ್ವಜನಿಕರು ಓಡಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ. ಹಲವೆಡೆ ರಸ್ತೆಗಳು ಜಲಾವೃತಗೊಂಡು ಸಿಕ್ಕಾಪಟ್ಟೆ ಟ್ರಾಫಿಕ್ಜಾಮ್ ಉಂಟಾಗಿದೆ. ಪಾಂಡಿಚೇರಿ ರೈಲ್ವೆ ನಿಲ್ದಾಣದಲ್ಲಿ ರೈಲು ಹಳಿಗಳು ನೀರಿನಿಂದ ತುಂಬಿಹೋಗಿವೆ.
ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸೇರಿ ರಕ್ಷಣಾತಂಡಗಳು ರಕ್ಷಣಾಕಾರ್ಯದಲ್ಲಿ ನಿರತವಾಗಿದೆ. ತಗ್ಗುಪ್ರದೇಶಗಳಲ್ಲಿ ಸಂತ್ರಸ್ತರಾದ ನೂರಾರು ಜನರನ್ನು ಬೋಟ್ಗಳ ಮೂಲಕ ರಕ್ಷಣೆ ಮಾಡಲಾಗ್ತಿದೆ. ಫೆಂಗಲ್ ಅಬ್ಬರಕ್ಕೆ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಭೋರ್ಗರೆಯುತ್ತಿವೆ. ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಸಮುದ್ರ ತೀರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕೆಲವೆಡೆ ಭೂಕುಸಿತಗಳು ಕೂಡ ಸಂಭವಿಸಿವೆ.
ಇನ್ನು ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಾಚರಣೆ ನಿಲ್ಲಿಸಿದ್ದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚಂಡಮಾರುತ ಉತ್ತರ ತಮಿಳುನಾಡು ಕರಾವಳಿ ದಾಟಿದ ನಂತರ ಇಂದು ಮುಂಜಾನೆಯಿಂದ ಕಾರ್ಯಾಚರಣೆ ಪುನಾರಂಭಿಸಿದೆ. ಈ ಮಧ್ಯೆ ಭಾರಿ ಬಿರುಗಾಳಿ ಕಾರಣ ಲ್ಯಾಂಡಿಂಗ್ ಸಾಧ್ಯವಾಗದೇ ವಿಮಾನವೊಂದು ಹರಸಾಹಸಪಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ.
ಈ ಮಧ್ಯೆ ಚೆನ್ನೈನ ಕೊಳತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿದ ಸಿಎಂ ಎಂ.ಕೆ.ಸ್ಟಾಲಿನ್ ಮಳೆ ಹಾನಿಯನ್ನು ಪರಿಶೀಲಿಸಿದ್ರು, ಸಂಕಷ್ಟದಲ್ಲಿರುವ ಜನರ ಕಷ್ಟ ಆಲಿಸಿದ್ರು. ಮಳೆ ಅನಾಹುತಗಳಿಂದ ಮೂವರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದು ಸಿಎಂ ಸ್ಟಾಲಿನ್ ಪರಿಹಾರ ಘೋಷಣೆ ಮಾಡಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ಕರ್ನಾಟಕದಲ್ಲೂ ವರುಣನ ಆರ್ಭಟ: ಇಷ್ಟೇ ಅಲ್ಲ ಕರ್ನಾಟಕದಲ್ಲೂ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ ಇದೆ. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಬೊಬ್ಬಿರಿಯುತ್ತಿರುವ ಫೆಂಗಲ್ ರಣಚಂಡಿ ಮಾರುತ ಕರ್ನಾಟಕದ ಮೇಲೂ ಪರಿಣಾಮ ಬೀರಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇದ್ದು ನಿನ್ನೆ ರಾತ್ರಿಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದೆ. ಇನ್ನು ಭಾರಿ ಮಂಜಿನ ಕಾರಣ ಬೆಂಗಳೂರಿನಿಂದ ಚೆನ್ನೈಗೆ ಹೊರಡಬೇಕಿದ್ದ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಬೆಳಗ್ಗೆಯಿಂದ ಕೆಲ ವಿಮಾನಗಳ ಹಾರಾಟ ಆರಂಭವಾಗಿದೆ.