ಬೆಂಗಳೂರು: ಕರ್ನಾಟಕ ವಿಧಾನಸಭೆ ಬಜೆಟ್ ಅಧಿವೇಶನ ಇಂದಿನಿಂದ ಫೆ.23ರವರೆಗೆ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನವಾದ ಇಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಭಾಷಣದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಹಾಡಿಹೊಗಳಿದ್ದಾರೆ.
ಇನ್ನು ಫೆ.16ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಹತ್ತು ದಿನಗಳು ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಬಲ ಅಸ್ತ್ರಗಳ ಮೂಲಕ ಆಡಳಿತಾರೂಢ ಕಾಂಗ್ರೆಸ್‌ಅನ್ನು ಕಟ್ಟಿಹಾಕಲು ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಸಜ್ಜಾಗಿದೆ.
ಪ್ರಮುಖವಾಗಿ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮೀಷನ್ ಆರೋಪ ಮತ್ತು ಬರ ಪರಿಹಾರದ ಹಣ ಬಿಡುಗಡೆ ಮಾಡದಿರುವ ವಿಷಯ ಮುಖ್ಯ ಚರ್ಚೆಗೆ ಬರಲಿದೆ. ಈ ಮೂಲಕ ಸರ್ಕಾರದ ವಿರುದ್ಧ ಸದನದಲ್ಲಿ ಮೈತ್ರಿಕೂಟ ಹೋರಾಟ ನಡೆಸಲು ಸಿದ್ಧವಾಗಿದೆ.
ಇನ್ನು ಮಂಗಳವಾರದಿಂದ ಕಲಾಪಗಳು ನಡೆಯಲಿವೆ. ಬಿಜೆಪಿಗೆ ತಕ್ಕ ಪ್ರತ್ತ್ಯುತ್ತರ ನೀಡಲು ಕಾಂಗ್ರೆಸ್ ಕೂಡ ಎಲ್ಲ ವಿಧದಲ್ಲೂ ಸಿದ್ಧತೆ ಮಾಡಿಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಕಾರಣ ಎರಡೂ ಕಡೆಗಳಿಂದ ಚರ್ಚೆಗೆ ಅಧಿವೇಶನ ಸಾಕ್ಷಿಯಾಗಲಿದೆ.
ಸರ್ಕಾರ ಹಲವು ಸವಾಲುಗಳ ಮಧ್ಯೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ಬಜೆಟ್ ಲೆಕ್ಕಾಚಾರದ ಮೇಲೆ ರಾಜ್ಯದ ಜನರ ಕಣ್ಣು ನೆಟ್ಟಿದೆ. ಒಂದು ಕಡೆ ರೈತರು, ಕೂಲಿ ಕಾರ್ಮಿಕರು, ಉದ್ಯೋಗಿಗಳು, ಉದ್ಯ,ಮಿಗಳು ಹೀಗೆ ಹತ್ತಾರು ರಂಗಗಳಲ್ಲಿ ತಲೆದೋರಿರುವ ಸಮಸ್ಯೆಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ.