ಬೆಂಗಳೂರು ಗ್ರಾಮಾಂತರ: ಕಸ ವಿಂಗಡಣೆ ಘಟಕದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶಾಲೆಯಿಂದ ಹೊರಗುಳಿದು ಕೆಲಸ ಮಾಡುತ್ತಿದ್ದ 9 ಮಕ್ಕಳನ್ನು ರಕ್ಷಣೆ ಮಾಡಿ ದೇವನಹಳ್ಳಿಯ ಬಾಲಕಿಯರ ಬಾಲ ಮಂದಿರಕ್ಕೆ ಹಸ್ತಾಂತರಿಸಿದ್ದಾರೆ.
ಬುಧವಾರ ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಮೇರೆಗೆ ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಪನಹಳ್ಳಿ ಗ್ರಾಮದಲ್ಲಿರುವ ಕಸ ವಿಂಗಡಣೆ ಘಟಕದ ಮೇಲೆ ದಾಳಿ ನಡೆಸಿ ಮಕ್ಕಳ ರಕ್ಷಣೆ ಮಾಡಿದ್ದಾರೆ.
ಇನ್ನು ಈ ದಾಳಿ ಯಾವುದೇ ಮಕ್ಕಳು ಕೆಲಸ ನಿರ್ವಹಿಸುತ್ತಿರುವುದು ಪತ್ತೆಯಾಗಲಿಲ್ಲ. ಆದರೆ, 9 ಮಕ್ಕಳು ಶಾಲೆಯಿಂದ ಹೊರಗುಳಿದು ಪಾಲಕರ ಜೊತೆಯಲ್ಲಿ ವಾಸವಾಗಿದ್ದರು. ಮೂಲತಃ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದ ನಿವಾಸಿಗಳಿವರು.
ಇನ್ನು ದಾಳಿ ವೇಳೆ ಸಿಕ್ಕಂತಹ ಮಕ್ಕಳನ್ನು ದೇವನಹಳ್ಳಿ ತಾಲೂಕಿನ ವಿಜಯಪುರದ ಸರ್ವೋದಯ ಸರ್ವಿಸ್ ಸೊಸೈಟಿಯಲ್ಲಿ ಪುನರ್ ವಸತಿ ಕಲ್ಪಿಸಲಾಗಿದ್ದು, ಸದ್ಯ ದೇವನಹಳ್ಳಿಯ ಬಾಲಕಿಯರ ಬಾಲ ಮಂದಿರಕ್ಕೆ ಮಕ್ಕಳನ್ನು ಹಸ್ತಾಂತರಿಸಲಾಗಿದೆ. ಮುಂದಿನ ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ವೇಳೆ ಕಸ ವಿಂಗಡಣೆ ಘಟಕದಲ್ಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ, ಮಕ್ಕಳು ಹಾಗೂ ಪೋಷಕರನ್ನು ಕಸ ವಿಂಗಡಣೆ ಘಟಕದಿಂದ ಸುಮಾರು 500 ಮೀಟರ್ ದೂರದಲ್ಲಿ ವಾಸಿಸುವುದಕ್ಕೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶೆಡ್‌ಗಳನ್ನು ನಿರ್ಮಿಸಿಕೊಡಬೇಕೆಂದು ಕಸ ವಿಂಗಡಣೆ ಘಟಕದ ಗುತ್ತಿಗೆದಾರರಿಗೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್. ನಾಗೇಂದ್ರ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಎಸ್.ಸುಬ್ಬಾರಾವ್, ಕಾರ್ಮಿಕ ನಿರೀಕ್ಷಕ ಅಂಬಿಕಾ, ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಸಂಜು, ಬಿಇಒ ಕಚೇರಿಯ ನಾಗಪ್ಪ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೌಮ್ಯ ಇದ್ದರು.