NEWSನಮ್ಮಜಿಲ್ಲೆಬೆಂಗಳೂರು

ಜಿಬಿಎ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಆಟೋ ಟಿಪ್ಪರ್‌ಗಳ ಹಾಜರಾತಿ ಪ್ರಮಾಣ ಶೇ. 95ಕ್ಕೆ ಏರಿಕೆ: ಸಿಇಒ ಕರೀಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್ ಗಳ ವಾಹನಗಳ ಸ್ಕ್ಯಾನಿಂಗ್ ಸಮಯ ಬದಲಾಯಿಸಲಾಗಿದ್ದು, ಎಲ್ಲಾ ಅಧಿಕಾರಿಗಳು ಪ್ರತಿನಿತ್ಯ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಪರಿಣಾಮ ಆಟೋ ಟಿಪ್ಪರ್ ಗಳ ಹಾಜರಾತಿ ಪ್ರಮಾಣ ಶೇ. 95% ಕ್ಕೆ ಏರಿಕೆಯಾಗಿದೆ ಎಂದು ಬೆಂ.ಘ.ತ್ಯಾ.ನಿ.ನಿ ದ ಸಿಇಓ ಕರೀಗೌಡ ಅವರು ತಿಳಿಸಿದ್ದಾರೆ.

ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವತಿಯಿಂದ ಆಟೋ ಟಿಪ್ಪರ್‌ಗಳ ಸ್ಕ್ಯಾನಿಂಗ್ ಸಮಯವನ್ನು ಬೆಳಗ್ಗೆ 5.30 ರಿಂದ 6.30 ರವರೆಗೆ ನಿಗದಿಪಡಿಸಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕರೀಗೌಡ ರವರ ನೇತೃತ್ವದಲ್ಲಿ ಕಳೆದ 15 ದಿನಗಳಿಂದ ಬಿ.ಎಸ್.ಡ.ಬ್ಲ್ಯೂ.ಎಂ.ಎಲ್ ನ ಎಲ್ಲಾ ಅಧಿಕಾರಿಗಳು ಪ್ರತಿನಿತ್ಯ ಬೆಳಿಗ್ಗೆ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಆಟೋ ಟಿಪ್ಪರ್‌ಗಳು, ಪೌರಕಾರ್ಮಿಕರ ಹಾಜರಾತಿ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ.

ನಗರದಲ್ಲಿ ಸುಮಾರು 200 ಮಸ್ಟರಿಂಗ್ ಕೇಂದ್ರಗಳಿದ್ದು, ಬೆಂ.ಘ.ತ್ಯಾ.ನಿ.ನಿ ದ ಸಿಇಒ, ಸಿಓಓ, 4 ಡಿಜಿಎಂಗಳು, 28 ಎಜಿಎಂ ಗಳು, ಚೀಫ್ ಮಾರ್ಷಲ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಪ್ರತಿನಿತ್ಯ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಹಾಜರಾತಿಯನ್ನು ಪರಿಶೀಲನೆ ನಡೆಸಲಿದ್ದಾರೆ.

ಜತೆಗೆ ಆಟೋ ಟಿಪ್ಪರ್‌ಗಳು ಮನೆ-ಮನೆಗೆ ಭೇಟಿ ನೀಡಿ ಹಸಿ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸೂಚನೆ ನೀಡಲಾಗುತ್ತಿದೆ. ಈ ಪರಿಣಾಮ ಆಟೋ ಟಿಪ್ಪರ್‌ಗಳ ಹಾಜರಾತಿ ಪ್ರಮಾಣ ಶೇ. 85 % ರಿಂದ 95 % ಕ್ಕೆ ಏರಿಕೆಯಾಗಿದೆ. ಇದರಿಂದ ರಸ್ತೆ ಬದಿ ತ್ಯಾಜ್ಯ ಬಿಸಾಡುವ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದ್ದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಸೂಕ್ತ ಕ್ರಮಗಳನ್ನ ಕೈಗೊಳ್ಳಲಾಗುವುದು.

ಟ್ರ್ಯಾಕ್ ಡ್ಯೂಟಿ ತಂತ್ರಾಂಶ ಅಭಿವೃದ್ಧಿ: ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಟ್ರ್ಯಾಕ್ ಡ್ಯೂಟಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಎಲ್ಲಾ ಅಧಿಕಾರಿಗಳ ಹಾಜರಾತಿಯನ್ನು ಆನ್‌ಲೈನ್ ಮೂಲಕ ಪರಿಶೀಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!