ಮೈಸೂರು: ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೈವೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಬೈಕ್, ಆಟೋ ಸೇರಿ ಕೆಲವು ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧ ಹೇರಿದೆ.
ಜುಲೈ 12ರಂದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಕ್, ಆಟೋ, ಟ್ರ್ಯಾಕ್ಟರ್ ಹಾಗೂ ಇತರ ಸಣ್ಣ ವಾಹನಗಳಿಗೆ ನಿಷೇಧ ಹೇರಿ ಅಧಿಸೂಚನೆ ಹೊರಡಿಸಿದ್ದು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ.
ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಗಂಟೆಗೆ 80ರಿಂದ 100 ಕಿಲೋಮೀಟರ್ ವೇಗದ ಮಿತಿ ನಿಗದಿಪಡಿಸಲಾಗಿದೆ. ಇನ್ನು ಜುಲೈ 24ವರೆಗೆ ಅತಿವೇಗದ ಚಾಲನೆ ಮಾಡಿದ 2 ಸಾವಿರಕ್ಕೂ ಹೆಚ್ಚು ವಾನಹಗಳ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಚಿಸಿದ ಸುರಕ್ಷತಾ ಸಮಿತಿಯು ಹೆದ್ದಾರಿ ಸುರಕ್ಷತೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿತ್ತು. ಮಾರ್ಚ್ನಲ್ಲಿ ಸಂಚಾರಕ್ಕೆ ಮುಕ್ತಗೊಂಡಿರುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇವರೆಗೂ 570ಕ್ಕೂ ಹೆಚ್ಚು ಅಪಘಾತಗಳು ಆಗಿರುವ ಬಗ್ಗೆ ವರದಿಯಾಗಿವೆ. ಆ ಅಪಘಾತಗಳಲ್ಲಿ 100ಕ್ಕೂ ಹೆಚ್ಚು ಜನ ಅಸುನೀಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನಗಳಲ್ಲಿ ನಿಧಾನಗತಿಯಲ್ಲಿ ಚಲಿಸುವ ಮತ್ತು ಸಣ್ಣ ವಾಹನಗಳನ್ನು ನಿಷೇಧಿಸುವ ಮೂಲಕ ಅಪಘಾತ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.