CRIMENEWSನಮ್ಮರಾಜ್ಯ

ಬನ್ನೂರು- ಹುಣಸಗನಹಳ್ಳಿಯಲ್ಲಿ ಭ್ರೂಣ ಲಿಂಗ ಪತ್ತೆ: ಖಾಸಗಿ ಆಸ್ಪತ್ರೆ ಮಾಲಕಿ ಸೇರಿ ಐವರ ಬಂಧನ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಹುಣಸಗನಹಳ್ಳಿಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಪ್ರಕರಣದಲ್ಲಿ (Fetal Sex Determination) ಸ್ಫೋಟಕ ವಿಚಾರ ಬಹಿರಂಗವಾಗಿದ್ದು, ಖಾಸಗಿ ಆಸ್ಪತ್ರೆ ಮಾಲಕಿಯೇ ಈ ದಂಧೆಯ ಕಿಂಗ್‌ಪಿನ್ ಎಂದು ಗೊತ್ತಾಗಿದೆ.

ಬನ್ನೂರಿನ ಎಸ್.ಕೆ. ಆಸ್ಪತ್ರೆ ಮಾಲಕಿ ಶ್ಯಾಮಲಾ ಈ ಕೃತ್ಯದ ಕಿಂಗ್‌ಪಿನ್. ಶ್ಯಾಮಲಾ ಸಹೋದರ (ತಮ್ಮ) ಗೋವಿಂದರಾಜು ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದ. ಏಜೆಂಟ್ ಪುಟ್ಟರಾಜು ಮೂಲಕ ಗಿರಾಕಿಗಳನ್ನು ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆಸುತ್ತಿದ್ದರು.

ಈಗ ಪ್ರಕರಣದಲ್ಲಿ ಸಾಲಿಗ್ರಾಮ ತಾಲೂಕಿನ ಭೇರ್ಯ ಮೂಲದ ಶಿವಕುಮಾರ್, ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದ ಹರೀಶ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಮಧ್ಯವರ್ತಿ ಪುಟ್ಟರಾಜು ಎಸ್ಕೇಪ್ ಆಗಿದ್ದಾನೆ. ಒಂದು ಭ್ರೂಣಪತ್ತೆಗೆ 25 ರಿಂದ 35 ಸಾವಿರ ರೂಪಾಯಿ ಚಾರ್ಜ್ ಮಾಡಲಾಗುತ್ತಿತ್ತು. ಆಸ್ಪತ್ರೆಯಿಂದ ಕಾರಿನಲ್ಲಿ ಸ್ಕ್ಯಾನಿಂಗ್ ಮಿಷಿನ್ ತಂದು ಭ್ರೂಣ ಪತ್ತೆ ಮಾಡಲಾಗುತ್ತಿತ್ತು.

ಅಲ್ಲದೆ ಶ್ಯಾಮಲಾ ಮನೆಯಲ್ಲಿಯೇ ಸ್ಕ್ಯಾನಿಂಗ್ ಮಿಷಿನ್ ಕೂಡ ಇತ್ತು. ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯಹುಣಗನಹಳ್ಳಿ ವ್ಯಾಪ್ತಿಯ ಫಾರಂ ಹೌಸ್ ಒಂದರಲ್ಲಿ ಲಿಂಗ ಭ್ರೂಣ ಪತ್ತೆ ಮಾಡಲಾಗುತ್ತಿತ್ತು.

ಲಿಂಗ ಭ್ರೂಣ ಪತ್ತೆ ನಡೆಸುತ್ತಿದ್ದ ಕೇಂದ್ರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ 4 ಗರ್ಭಿಣಿಯರು ಭ್ರೂಣ ಲಿಂಗ ಪತ್ತೆಗೆ ಬಂದಿದ್ದರು ಎಂದು ತಿಳಿಸಿದ್ದಾರೆ.

ಇನ್ನು ಈ ಕೇಂದ್ರದಲ್ಲಿ ಸ್ಕ್ಯಾನಿಂಗ್ ಬಳಕೆ ಮಾಡುವ ಉಪಕರಣವು ಇತ್ತು. ಈ ಹಿನ್ನೆಲೆಯಲ್ಲಿ ಹೆರಿಗೆ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ದಾಳಿ ನಡೆಸಿ ಐವರನ್ನು ಬಂಧಿಸಲಾಗಿದೆ.

ಈ ಕುರಿತು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಸ್ಕ್ಯಾನಿಂಗ್‌ಗೆ ಬರುವ ಗರ್ಭಿಣಿಯರನ್ನು ಮಾನಿಟರ್ ಮಾಡುವ ಮೂಲಕ ಈ ಕಾರ್ಯಾಚರಣೆ ಮಾಡಿದ್ದೇವೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ 5 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ದಾಳಿ ಮಾಡಿದ ವೇಳೆ ಇಬ್ಬರು ಗರ್ಭಿಣಿಯರು ಸ್ಕ್ಯಾನಿಂಗ್‌ಗೆ ಬಂದಿದ್ದರು. ಅವರ ಪೋಷಕರ ವಿರುದ್ಧವೂ ಕೇಸ್ ದಾಖಲಿಸಿದ್ದೇವೆ. ನರ್ಸ್ ಒಬ್ಬರ ಮುಂದಾಳತ್ವದಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಆಕೆ ಬನ್ನೂರಿನ ಎಸ್.ಕೆ. ಆಸ್ಪತ್ರೆ ಉದ್ಯೋಗಿಯಾಗಿದ್ದಾರೆ. ರೇಡ್ ನಡೆದ ಜಾಗದಲ್ಲಿ ಎಷ್ಟು ದಿನಗಳಿಂದ ಭ್ರೂಣ ಪತ್ತೆ ನಡೆಯುತ್ತಿತ್ತು. ಇಲ್ಲಿಯವರೆಗೆ ಎಷ್ಟು ಭ್ರೂಣ ಹತ್ಯೆ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!