ಬನ್ನೂರು: ಪಟ್ಟಣದ ಕಾವೇರಿ ವೃತ್ತ ಮತ್ತು ಸಂತೇಮಾಳದ ಬಸವೇಶ್ವರ ಪ್ರತಿಮೆ ಬಳಿ ಅಳವಡಿಸಿರುವ ಸಿಸಿ ಕ್ಯಾಮರದ ಮೂಲಕ ಬೈಕ್ ಸವಾರ ರೈತರಿಗೆ 5ಸಾವಿರದಿಂದ 25 ಸಾವಿರ ರೂ.ಗಳ ವರೆಗೆ ದಂಡ ವಿದಿಸುತ್ತಿದ್ದು ಭಾರಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹೋಬಳಿಯ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ರೈತರು ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕಿನ ಬನ್ನೂರು ಸಂತೇಮಾಳದ ಬಸವೇಶ್ವರ ಪ್ರತಿಮೆ ಬಳಿ ಬುಧವಾರ ಜಮಾಯಿಸಿದ ಸಹಾಸ್ರಾರು ರೈತರು ಹೋಬಳಿಯ ಸುತ್ತಮುತ್ತಲ್ಲ ಗ್ರಾಮೀಣ ಭಾಗದ ರೈತರು ದ್ವಿಚಕ್ರ ವಾಹನದಲ್ಲಿ ತಮ್ಮ ಜಮೀನುಗಳಿಗೆ ಕೃಷಿ ಚಟುವಟಿಕೆ ಸೇರಿ ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ಬೈಕ್‌ನಲ್ಲಿ ಓಡಾಡುತ್ತಿರುತ್ತಾರೆ. ಆದರೆ, ಕಾವೇರಿ ವೃತ್ತ ಹಾಗೂ ಸಂತೇಮಾಳದ ಬಸವೇಶ್ವರ ಪ್ರತಿಮೆ ಬಳಿ ಸಿಸಿ ಕ್ಯಾಮರಾ ಅಳವಡಿಸಿ ದಂಡ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಇನ್ನು ಹೊಲ ಗದ್ದೆಗಳಿಗೆ ಹೋಗಿ ಜಾನುವಾರುಗಳಿಗೆ ಮೇವು ತರಬೇಕಾದ ವೇಳೆ ಹೆಲ್ಮೆಟ್ ಧರಿಸಲು ಸಾಧ್ಯವಿಲ್ಲ. ಹೀಗಾಗಿ ಸಿಸಿ ಕ್ಯಾಮರಾದಲ್ಲಿ ಕಂಡ ಹೆಲ್ಮೆಟ್ ರಹಿತ ಚಾಲನೆಯನ್ನೇ ಆಧಾರವಾಗಿಟ್ಟುಕೊಂಡು ಈ ರೀತಿ ದಂಡವಿಧಿಸುವುದು ಯಾವ ನ್ಯಾಯಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಸಿಸಿ ಕ್ಯಾಮರಾ ತೆರವುಗೊಳಿಸುವಂತೆ ಒತ್ತಾಯ ಮಾಡುತ್ತಿದ್ದೇವೆ. ಆದರೆ, ಕೆಲ ಅಧಿಕಾರಿಗಳು ಈ ರೀತಿ ಕ್ಯಾಮರಾ ತೆರೆವುಗೊಳಿಸುವ ಒತ್ತಾಯ ಬೇಡ. ಇದರಿಂದ ಕಳ್ಳರಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಹೀಗಾಗಿ ನಾವು ಕ್ಯಾಮರಾ ತೆರವುಗೊಳಿಸುವುದನ್ನು ಬಿಟ್ಟು ರೈತರಿಗೆ ಹಾಕುತ್ತಿರುವ ದಂಡವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಇನ್ನು ರೈತರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಪೋಷಕರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ತರಕಾರಿ, ಹೂವು, ಹಣ್ಣು ಮಾರಾಟಗಾರರು, ಹಳ್ಳಿಯಿಂದ ಹಳ್ಳಿಗೆ ಬನ್ನೂರು, ಸಂತೇಮಾಳದ ಮಾರ್ಗವಾಗಿ, ದ್ವಿಚಕ್ರ ವಾಹನಗಳ ಮೂಲಕ ಕೃಷಿ ಚಟುವಟಿಕೆ ಹಾಗೂ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಹಲವಾರು ಬಾರಿ ಓಡಾಡಲು ತುಂಬಾ ಸಮಸ್ಯೆಯಾಗುತ್ತಿದೆ ಎಂದು ಸ್ಥಳಕ್ಕಾಗಮಿಸಿದ ಅಧಿಕಾರಿಗಳಿಗೆ ವಿವರಿಸಿದರು.
ಪ್ರತಿನಿತ್ಯ ರೈತರು ತಮ್ಮ ಜಮೀನುಗಳಿಗೆ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಜಾನುವಾರುಗಳಿಗೆ ಮೇವು, ರಸಗೊಬ್ಬರ ತರಲು ಪದೇಪದೆ ಹೆಲ್ಮೆಟ್ ಧರಿಸಿಕೊಂಡು ಓಡಾಡಲು ಸಾಧ್ಯವಾಗದ ಕಾರಣ ದ್ವಿಚಕ್ರ ವಾಹನಗಳಿಂದ ಸಂಚಾರ ಮಾಡುವ ರೈತರು, ಸ್ಥಳೀಯರಿಗೆ ಪ್ರತಿನಿತ್ಯ ಮೊಬೈಲ್ ಮೆಸೇಜ್ ಮೂಲಕ 500 ರೂ. ದಂಡ ಕಟ್ಟುವಂತೆ ನೋಟಿಸ್ ಬರುತ್ತಿದೆ.
ಹೀಗೆ ಈ ತನಕ ಒಬ್ಬೊಬ್ಬ ರೈತನಿಗೆ 5 ಸಾವಿರ, 10 ಸಾವಿರ, 20 ಸಾವಿರದಿಂದ 25 ಸಾವಿರ ರೂ.ವರೆಗೂ ದಂಡದ ನೋಟಿಸ್‌ಗಳು ಜಾರಿಯಾಗಿವೆ. ಆದ್ದರಿಂದ ಈ ಬಂದಿರುವ ದಂಡವನ್ನು ಕೈ ಬಿಡಬೇಕು. ಜತೆಗೆ ಮುಂದೆ ಈ ರೀತಿ ನೋಟಿಸ್ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತ ರೈತರು ಒತ್ತಾಯಿಸಿದರು.
ಇನ್ನು 300ರಿಂದ 500 ರೂ.ವರೆಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಈ ರೀತಿ ನೋಟಿಸ್ ಬಂದರೆ ಅವರು ದಂಡ ಕಟ್ಟಲು ಸಾಧ್ಯವೆ. ಬಡ ರೈತರು ಈ ಹಣ ಎಲ್ಲಿಂದ ತಂದು ಕಟ್ಟಬೇಕು? ಸಾಲ ಮಾಡಿ ಕೃಷಿ ಚಟುವಟಿಕೆ ಮಾಡುತ್ತಿರುವ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ರೈತರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಒಡ್ಡುತಿದೆ, ಸರ್ಕಾರ ವಾರಂಟಿಯೆ ಇಲ್ಲದ ಗ್ಯಾರಂಟಿಗಳ ಜಾರಿಗೆ ತಂದು ರೈತರ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳಾದ ತಾವು ರೈತರ ರಕ್ಷಣೆ ಮಾಡಲು ಗಮನ ಹರಿಸಿ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಮಾರಕವಾಗಿರುವ ಸಿಸಿ ಕ್ಯಾಮರಾ ತೆರವುಗೊಳಿಸಿ, ಇಲ್ಲವೇ ದಂಡ ಹಾಕುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಿ ಹಾಗೂ ಇಲ್ಲಿತನಕ ಬಂದಿರುವ ದಂಡವನ್ನು ವಜಾಗೊಳಿಸಿ ಕೊಡಬೇಕೆಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ, ಡಿವೈಎಸ್‌ಪಿ ರಘು, ಬನ್ನೂರು ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್, ನರಸೀಪುರ ಸರ್ಕಲ್ ಇನ್ಸ್‌ಪೆಕ್ಟರ್ ಧನಂಜಯ ಕುಮಾರ್, ತಿ.ನರಸೀಪುರ ತಹಸೀಲ್ದಾರ್‌ಸುರೇಶ್ ಆಚಾರ್ ಅವರು ಕ್ಯಾಮರಾದ ವಿಚಾರವನ್ನು ಜಿಲ್ಲ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಇನ್ನು ಒಂದು ವಾರದೊಳಗೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈ ಬಿಟ್ಟರು.
ರಾಜ್ಯ ಕಬ್ಬು ಬೆಳರಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅತ್ತಹಳ್ಳಿ ಸಿ.ಲಿಂಗಣ್ಣ, ಅರುಣ್ ಕುಮಾರ್, ಬನ್ನೂರು ಸೂರಿ, ಕೆಇಬಿ ನಂಜೇಗೌಡ, ಹನುಮನಾಳು ಲೋಕೇಶ್, ಶಿವರಾಜ್, ಕುಂತನಹಳ್ಳಿ ಸ್ವಾಮಿ, ಕುಳ್ಳೇಗೌಡ, ಬೀಡನಹಳ್ಳಿ ದೇವರಾಜ್ ಸೇರಿದಂತೆ ಸಹಸ್ರಾರು ರೈತರು ಭಾಗವಹಿಸಿದ್ದರು.