ಮೈಸೂರು: ಇಂದು ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೊಜೆ ಸಲ್ಲಿಸುತ್ತಿದ್ದಾರೆ.
ವಿವಾಹಿತ ಅಥವಾ ಅವಿವಾಹಿತ ಹೆಂಗಳೆಯರು- ಪತಿ, ತಂದೆ, ಸಹೋದರ, ಮಗ ಮತ್ತು ಮನೆಯ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಭೀಮನ ಅಮವಾಸ್ಯೆ ವ್ರತ ಆಚರಿಸುತ್ತಿದ್ದಾರೆ.
ಅದರಂತೆಯೇ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿರುವ ಕರಿಯಪ್ಪನ ದೇಗುಲದಲ್ಲಿ ಕರಿಯಪ್ಪನ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಅಮವಾಸ್ಯೆ ಹಿನ್ನೆಲೆ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಎಂದು ಕರೆಯಲಾಗುವ ಭೀಮನ ಅಮವಾಸ್ಯೆ ವ್ರತವು ದಕ್ಷಿಣ ಭಾರತದಲ್ಲಿ ಅತ್ಯಂತ ಮಂಗಳಕರವಾದ ವ್ರತವಾಗಿದೆ. ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳಲ್ಲಿ, ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಆಷಾಢ ಮಾಸದ ಅಮಾವಾಸ್ಯೆಯ ರಾತ್ರಿಯಲ್ಲಿ ಮಹಿಳೆಯರು ಈ ಉಪವಾಸವನ್ನು ಕೈಗೊಳ್ಳುತ್ತಾರೆ.
ಆಷಾಢ ಮಾಸವು ಹಿಂದೂ ಸಂಸ್ಕೃತಿಯ ಪ್ರಕಾರ ಹೊಸ ಆರಂಭದ ಸಮಯವಾಗಿದೆ. ಈ ವರ್ಷ ಭೀಮನ ಅಮಾವಾಸ್ಯೆಯನ್ನು 2023ರ ಜುಲೈ 17 ರಂದು ಸೋಮವಾರ ಆಚರಿಸಲಾಗುತ್ತಿದೆ. ಈ ವ್ರತವನ್ನು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ವ್ರತವಾಗಿದ್ದು, ದಂಪತಿಗಳು ಈ ದಿನ ಶಿವ – ಪಾರ್ವತಿ ಪೂಜೆಯನ್ನು ಮಾಡುವುದು ಆಚರಣೆಯಲ್ಲಿದೆ.
ಭೀಮನ ಅಮಾವಾಸ್ಯೆ ಮಹತ್ವ: ವಿವಾಹಿತ ಅಥವಾ ಅವಿವಾಹಿತ ಹೆಂಗಳೆಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಈ ವ್ರತವನ್ನು ಆಚರಿಸುತ್ತಾರೆ.
ವಿವಾಹಿತ ಮಹಿಳೆಯರು ಮದುವೆಯಾದ ನಂತರ ಕನಿಷ್ಠ 9 ವರ್ಷಗಳ ಕಾಲ ಈ ವ್ರತವನ್ನು ಮಾಡುತ್ತಾರೆ. ಇನ್ನೂ ಅವಿವಾಹಿತ ಯುವತಿಯರು ಸದ್ಗುಣಶೀಲ ಪತಿಯನ್ನು ಪಡೆಯುವುದಕ್ಕಾಗಿ, ಸಹೋದರರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ.