ಬೆಂಗಳೂರು: 2024-25ರ ಸಾಲಿನ ಬಿಬಿಎಂಪಿ ಬಜೆಟ್ ಗಾತ್ರವೇ ₹12,371 ಕೋಟಿ ಆದರೆ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ₹39,000 ಕೋಟಿಯಷ್ಟು ಬೃಹತ್ ಮೊತ್ತವನ್ನು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮುಂದಾಗಿರುವ ಬಿಬಿಎಂಪಿ ಕ್ರಮಕ್ಕೆ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.
ಬಿಬಿಎಂಪಿ ಬಜೆಟ್‌ಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಸಾಲ ಮಾಡುವ ಮುನ್ನ ಸರಿಯಾದ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
2024-25ರ ಸಾಲಿನ ಬಿಬಿಎಂಪಿ ಬಜೆಟ್ ಗಾತ್ರವೇ ₹12,371 ಕೋಟಿ ಇದ್ದು, ಇದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಸಾಲ ಪಡೆಯುತ್ತಿರುವುದು ಜನರ ತಲೆಯ ಮೇಲೆ ಸಾವ ಹೊರಿಸುವ ಹುನ್ನಾರ ಎಂಬಂತೆ ಕಾಣುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕೂಡಲೇ ಇದರತ್ತ ಗಮನ ಹರಿಸಿ, ಬಿಬಿಎಂಪಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವುದನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟು ದೊಡ್ಡ ಮೊತ್ತದ ಸಾಲ ಪಡೆಯುವ ಮೊದಲ, ಲಾಭ-ನಷ್ಟ, ದೀರ್ಘಕಾಲದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು. ಅದನ್ನು ಬಿಟ್ಟು ಹೀಗೆ ಬೇಕಾಬಿಟ್ಟಿಯಾಗಿ ಸಾಲ ಮಾಡಿದರೆ ಅದನ್ನು ತೀರುವುದಕ್ಕೆ ಜನರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತೀರಿ ಇದು ನಿಮಗೆ ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಜನರಿಗೆ ಮಾಹಿತಿ ಕೊಡಿ: ಯಾವ ಆಧಾರಾದ ಮೇಲೆ ಇಷ್ಟು ದೊಡ್ಡ ಮೊತ್ತದ ಸಾಲ ಪಡೆಯುತ್ತಿದ್ದೀರೆ ಎಂಬ ಬಗ್ಗೆ ಜನರಿಗೆ ಮಾಹಿತಿ ಕೊಡಿ. ಸಾಲ ಪಡೆಯಲು ಬಿಬಿಎಂಪಿ ಯಾವ ಆಸ್ತಿಯನ್ನು ಅಡಮಾನ ಇಡುತ್ತಿದೀರಿ ಎಂಬುವುದನ್ನು ಸಾರ್ವಜನಿಕರಿಗೆ ತಿಳಿಸಿ. ಬಿಬಿಎಂಪಿ ಈಗಾಗಲೇ ಮುಗಿದಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಸುಮಾರು ₹6000 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಈಗ ಮತ್ತೆ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಸಾಲ ಮಾಡಿ ಅದನ್ನು ಬೆಂಗಳೂರು ಜನರ ಮೇಲೆ ಹೊರಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನ ಮಾಡುವ ಮುನ್ನ, ಅವುಗಳಿಂದ ದೀರ್ಘಕಾಲದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಬೇಕು, ಏನೂ ಮಾಡದೇ ಇಷ್ಟು ದೊಡ್ಡ ಮಟ್ಟದಲ್ಲಿ ಸಾಲ ಮಾಡಿ, ಅದನ್ನು ಜನರ ಮೇಲೆ ಹೊರಿಸಬೇಡಿ ಎಂದು ಹೇಳಿದ್ದಾರೆ.
ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಕೊಡಿ: ಬೃಹತ್ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಬೆಂಗಳೂರಿನ ಮೂಲಭೂತ ಸೌಕರ್ಯಗಳಿಗೆ ಮೊದಲು ಆದ್ಯತೆ ಕೊಡಬೇಕು. ರಸ್ತೆಗುಂಡಿಗಳನ್ನು ಮುಚ್ಚುವುದು, ರಸ್ತೆಗಳ ಮರು ಡಾಂಬರೀಕರಣ, ಸುರಕ್ಷಿತ ಪಾದಚಾರ ಮಾರ್ಗಗಳ ನಿರ್ಮಾಣ, ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಮೊದಲು ಗಮನ ಕೊಡಿ.
ನಗರದಲ್ಲಿ ದಿನೇದಿನೇ ಟ್ರಾಫಿಕ್ ಸಮಸ್ಯೆ ಮಿತಿ ಮೀರುತ್ತಿದ್ದು, ಬಿಎಂಟಿಸಿ ಬಸ್ ಸಂಖ್ಯೆ ಹೆಚ್ಚಿಸುವುದು, ಮೆಟ್ರೊ ರೈಲು ಮಾರ್ಗದ ವಿಸ್ತರಣೆ ಮಾಡಿ. ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸುವ ಬಗ್ಗೆ ಬಿಬಿಎಂಪಿ ಮತ್ತು ಸರ್ಕಾರ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದರು.
ಸ್ಕೈಡೆಕ್‌ನಂತಹ ಆಡಂಬರದ ಯೋಜನೆ ಬೆಂಗಳೂರಿಗೆ ಅಗತ್ಯವಿಲ್ಲ. ಇಂತಹ ಯೋಜನೆಗಳಿಂದ ಜನಸಾಮಾನ್ಯರಿಗೆ ಯಾವ ಪ್ರಯೋಜನವೂ ಇಲ್ಲ. ಇಂತಹ ಆಡಂಬರದ ಯೋಜನೆಗಳಿಗೆ ಹಣ ಪೋಲು ಮಾಡುವ ಬದಲು, ನಗರದಲ್ಲಿ ಆಗಬೇಕಾದ ತುರ್ತಾದ ಯೋಜನೆಗಳಿಗೆ ಹಣ ಬಳಕೆ ಮಾಡಿ. ತಮ್ಮ ಪ್ರತಿಷ್ಠೆಗಾಗಿ ಇಂತಹ ಯೋಜನೆಗಳನ್ನು ರೂಪಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.
ಇನ್ನು ಸಾಲ ಮಾಡಿ ಇಂತಹ ಯೋಜನೆ ಅನುಷ್ಠಾನ ಮಾಡುವ ಮುನ್ನ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಆಹಿಸಿದ್ದಾರೆ.