ಬೆಂಗಳೂರು: ಕರ್ತವ್ಯ ಲೋಪ ಆರೋಪದಡಿ ಬೊಮ್ಮನಹಳ್ಳಿ ಬಿಬಿಎಂಪಿ ವಲಯದ ಆರು ಮಂದಿ ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಿ ಬಿಬಿಎಂಪಿ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.
ಈ ಅಧಿಕಾರಿಗಳ ವಿರುದ್ಧ ಆಸ್ತಿ ತೆರಿಗೆ ಸಂಬಂಧಿತ ಕರ್ತವ್ಯ ಲೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಕಾರಣ ಕೇಳಿ ಜಂಟಿ ಆಯುಕ್ತ ಅಜಿತ್ ಅವರಿಗೆ ನೋಟಿಸ್ ಹಾಗೂ ಕಂದಾಯ ಉಪ ಆಯುಕ್ತ ಡಿ.ಕೆ.ಬಾಬು ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸುವಂತೆ ಸೂಚಿಸಿದ್ದರು.
ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆತಿಗೆ ಸಂಗ್ರಹ, ತೆರಿಗೆ ಬಾಕಿ, ಟಾಪ್- 50 ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಗೃಹ ಹಾಗೂ ಗೃಹೇತರ ಕಟ್ಟಡಗಳ ಮಾಲೀಕರ ಆಸ್ತಿಗಳನ್ನು ಮುಟ್ಟುಗೋಲು ಹಾಗೂ ಬೀಗಮುದ್ರೆ ಹಾಕದ ಪ್ರಕರಣಗಳು ಜ.30 ರಂದು ನಡೆಸಿದ ಪರಿಶೀಲನೆ ವೇಳೆ ಕಂಡು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಜಂಟಿ ಆಯುಕ್ತರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಹಾಗೂ ಡಿ.ಕೆ.ಬಾಬು ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.
ಡಿಸಿ ಬಾಬು ಕಳೆದ ಎರಡು ತಿಂಗಳಲ್ಲಿ ಟಾಪ್-50 ಗೃಹೇತರ ಕಟ್ಟಡಗಳಲ್ಲಿ ಒಂದು ಕಟ್ಟಡವನ್ನು ಸೀಲ್ ಮಾಡಿಲ್ಲ. ಅದೇ ರೀತಿ ಟಾಪ್ -50 ವಸತಿ ಕಟ್ಟಡಗಳಲ್ಲಿ ಒಂದು ಆಸ್ತಿಯನ್ನು ಅಟ್ಯಾಚ್ ಮೆಂಟ್ ಮಾಡಿಲ್ಲ. ಈ ಕುರಿತಂತೆ ಡಿಕೆ ಬಾಬು ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕಿದೆ ಎಂದು ಮೌದ್ಗಿಲ್ ವಿವರಿಸಿದ್ದಾರೆ.