ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಮತ್ತು ಗಾಳಿಯಿಂದ ಬಿಳುವಂತಹ ಮರಗಳ ರೆಂಬೆ, ಕೊಂಬೆಗಳನ್ನು ತೆರವುಗೊಳಿಸುವ ಹಾಗೂ ಅಪಾಯ ಸ್ಥಿತಿಯಲ್ಲಿ ಇರುವಂತಹ ಮರಗಳನ್ನು ತೆರವುಗೊಳಿಸುವ ಸಂಬಂಧ ಬೆಂಗಳೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 28 ಮರಗಳ ವ್ಯವಸ್ಥಿತ ನಿರ್ವಹಣಾ ತಂಡಗಳನ್ನು ರಚಿಸಿ ಮುಖ್ಯ ಆಯುಕ್ತ ತುಷಾರ್ ಗಿರನಾಥ್ ಆದೇಶ ಹೊರಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಮಳೆ-ಗಾಳಿಯು ಹೆಚ್ಚಾಗಿದ್ದು, ನಗರದಾದ್ಯಂತ ಹಲವು ಮರಗಳು/ರೆಂಬೆ ಕೊಂಬೆಗಳು ಧರೆಗುರುಳುತ್ತಿವೆ. ಇದರಿಂದ ಸಾರ್ವಜನಿಕರಿಗೆ, ಸಾರಿಗೆ ಸಂಚಾರಕ್ಕೆ, ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿ ಸಂಚಾರ ವ್ಯತ್ಯಯ ಉಂಟಾಗಿಗುತ್ತಿದೆ ಹಾಗೂ ಸಾರ್ವಜನಿಕರ ವಾಹನಗಳು ಜಖಂಗೊಂಡಿವೆ.
ಈ ಎಲ್ಲವನ್ನು ತಿಳಿದು ವಿಧಾನಸಭಾ ಕ್ಷೇತ್ರವಾರು ರಚಿಸಲಾಗಿರುವ ಮರಗಳ ವ್ಯವಸ್ಥಿತ ನಿರ್ವಹಣೆ ತಂಡಗಳಲ್ಲಿ ಒಂದು ತಂಡದಲ್ಲಿ ಒಟ್ಟು 8 ಜನ ಸಿಬ್ಬಂದಿಳನ್ನೊಳಗೊಂಡಂತೆ ತಂಡವನ್ನು ರಚಿಸಲಾಗಿದ್ದು, ಈ ತಂಡಗಳಲ್ಲಿ ಮರಗಳ ಹಾಗೂ ರೆಂಬೆ/ಕೊಂಬೆಗಳನ್ನು ತೆರವುಗೊಳಿಸುವುದಕ್ಕೆ ಅವಶ್ಯವಿರುವ ಎಲ್ಲ ಉಪಕರಣಗಳೊಂದಿಗೆ ನೈಪುಣ್ಯತೆ ಹೊಂದಿರುವಂತಹ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕತ್ತರಿಸಲಾಗಿರುವ ಮರಗಳ ಹಾಗೂ ರೆಂಬೆ/ ಕೊಂಬೆಗಳನ್ನು ಮತ್ತು ಅದರ ತ್ಯಾಜ್ಯವನ್ನು ತೆರವುಗೊಳಿಸುವ ಸಂಬಂಧ ಒಂದು ಬೃಹತ್ ವಾಹನವನ್ನು ಚಾಲಕರ ಸಮೇತ ನಿಯೋಜಿಸಲಾಗಿದೆ. ಈ ತಂಡಗಳ ಕರ್ತವ್ಯಗಳು ಈ ರೀತಿ ಇವೆ.
ಕರ್ತವ್ಯಗಳು: 1. ವಿಧಾನಸಭಾ ಕ್ಷೇತ್ರವಾರು ನಿಗಧಿಪಡಿಸಿರುವ ತಂಡಗಳು ಅಯಾ ಕ್ಷೇತ್ರದಲ್ಲಿ ವ್ಯವಸ್ಥಿತ ಮರಗಳ ನಿರ್ವಹಣಾ ಕೆಲಸ ಕಾರ್ಯಗಳನ್ನು (Tree Canopy Management) ಕೈಗೊಳ್ಳತಕ್ಕದ್ದು. 2. ಮಳೆಯಿಂದ ಬಿದ್ದುಹೋಗುವ ಮರಗಳು/ ರೆಂಬೆ ಕೊಂಬೆಗಳನ್ನು ತುರ್ತಾಗಿ ತೆರವುಗೊಳಿಸುವುದು.
- ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿನ ಎಲ್ಲಾ ಸಾರ್ವಜನಿಕರ ದೂರುಗಳನ್ನು, ಸಹಾಯ ಆಪ್‌ನಲ್ಲಿ (Sahaaya 2 App), ಕಂಟ್ರೋಲ್ ರೂಮ್‌ಗೆ ಹಾಗೂ ನೇರವಾಗಿ ಬರುವ ದೂರುಗಳಿಗೆ ತುರ್ತಾಗಿ ಸ್ಪಂಧಿಸಿ ಸಾರ್ವಜನಿಕರಿಗೆ, ಆಸ್ತಿ-ಪಾಸ್ತಿಗಳಿಗೆ ಹಾನಿ ಆಗದಂತೆ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮವಹಿಸತಕ್ಕದ್ದು ಹಾಗೂ ಪ್ರತಿ ನಿತ್ಯ ಸದರಿ ತಂಡಗಳು ತಮ್ಮ ತಮ್ಮ ವಿಧಾನ ಸಭಾ ಕ್ಷೇತ್ರವಾರು ಪ್ರತಿಯೊಂದು ರಸ್ತೆಯಲ್ಲಿ ತಪಾಸಣೆ ನಡೆಸಿ ರಸ್ತೆಬದಿ ಬಿದ್ದಿರುವ ಮರಗಳ ತುಂಡುಗಳು, ರೆಂಬೆಗಳನ್ನು ಹಾಗೂ ಅಪಾಯದ ಸ್ಥಿತಿಯಲ್ಲಿ ಇರುವಂತಹ ಮರಗಳ ಹಾಗೂ ಸದರಿ ರೆಂಬೆ/ಕೊಂಬೆಗಳನ್ನು ತೆರವುಗೊಳಿಸುವುದು.
-
ಎಲ್ಲಾ ಕ್ಷೇತ್ರಗಳಲ್ಲಿ ಏಕ ಕಾಲಕ್ಕೆ ಗಾಳಿ/ಮಳೆ ಬಾರದ ಕಾರಣ ವಲಯದ ಯಾವ ಪ್ರದೇಶದಲ್ಲಿ ಹೆಚ್ಚಿನ ಗಾಳಿ/ಮಳೆ ಬರುತ್ತದೆ ಹಾಗೂ ತುರ್ತಾಗಿ ಅವಶ್ಯವಿದ್ದ ಕಡೆಗಳಲ್ಲಿಯೂ ಸಹ ವಲಯದ ಜಂಟಿ ಆಯುಕ್ತರು, ವಲಯ ಮಟ್ಟದ ಅರಣ್ಯಾಧಿಕಾರಿಗಳು ಹಾಗೂ ಕೇಂದ್ರ ಕಛೇರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸುವ ಕಾರ್ಯಗಳನ್ನು ನಿರ್ವಹಿಸುವುದು.
-
ಪ್ರತಿ ದಿನ ನಿರ್ವಹಿಸಿದ ಕೆಲಸ ಕಾರ್ಯಗಳ ಸಂಬಂಧ ದಾಖಲಾತಿ ವಹಿಯನ್ನು ನಿರ್ವಹಿಸುವುದು. 6. ಮರಗಳ ವ್ಯವಸ್ಥಿತ ನಿರ್ವಹಣೆಯ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ತಂಡಗಳ ವಿರುದ್ಧ ಯಾವುದೇ ದೂರುಗಳು ಬಂದಲ್ಲಿ ವಲಯ ಮಟ್ಟದ ಅರಣ್ಯಾಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ. 7. ರಸ್ತೆ ಬದಿ ಬಿದ್ದಿರುವ ಡೆಬ್ರಿಸ್ ಅನ್ನು ತೆರವುಗೊಳಿಸತಕ್ಕದ್ದು, ಮಳೆ ಹಾನಿಯಿಂದ ಯಾವುದೇ ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗದಂತೆ ಕರ್ತವ್ಯ ನಿರ್ವಹಿಸುವುದು.
ಹಾಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳ ವ್ಯವಸ್ಥಿತ ನಿರ್ವಹಣೆ ಸಂಬಂಧ ನಿಯೋಜಿಸಲಾಗಿರುವ ತಂಡಗಳು ಮಳೆ ಗಾಳಿಗೆ ಬೀಳುವ ಬೀಳಬಹುದಾದ ಮರ/ರೆಂಬೆ ಕೊಂಬೆಗಳನ್ನು ಹಾಕಿ ಇದರಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪರಿಶೀಲಿಸಿ ತ್ವರಿತಗತಿಯಲ್ಲಿ ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸದೆ ಇರುವುದು ಕಂಡುಬಂದಿರುತ್ತದೆ ಹಾಗೂ ರಸ್ತೆ ಬದಿಯಲ್ಲಿ ಒಣಗಿರುವ/ ಅಪಾಯಸ್ಥಿತಿಯಲ್ಲಿ ಇರುವ ಮರಗಳ ತೆರವುಗೊಳಿಸದೇ ಇರುವುದರಿಂದ ಮಳೆ ಗಾಳಿಗೆ ಅಪಾಯಸ್ಥಿತಿಯಲ್ಲಿ ಇರುವ ಮರಗಳು ಬಿದ್ದು ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಆಸ್ತಿ-ಪಾಸ್ತಿಗೆ ಹಾನಿಯಾಗಿ ಸಂಚಾರ ವ್ಯತ್ಯಯ ಉಂಟಾಗಿರುತ್ತದೆ ಮತ್ತು ಸಾಕಷ್ಟು ಸಾರ್ವಜನಿಕರ ವಾಹನಗಳು ಜಖಂಗೊಂಡಿರುತ್ತವೆ.
ಈ ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳ ವ್ಯವಸ್ಥಿತ ನಿರ್ವಹಣೆ ತಂಡಗಳು ಹಾಲಿ ಮತ್ತಷ್ಟು ತಮ್ಮ ಕಾರ್ಯವೈಖರಿಯನ್ನು ಹೆಚ್ಚಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಬೀಳುವ/ ಬೀಳಬಹುದಾದ ಮರ/ರಂಬೆ ಕೊಂಬೆಗಳನ್ನು ಹಾಗೂ ಅಪಾಯಸ್ಥಿತಿಯಲ್ಲಿ ಇರುವಂತಹ ಮರಗಳನ್ನು ಈ ಕೂಡಲೇ ನಿಯಮಾನುಸಾರ ತೆರವುಗೊಳಿಸಿ ಮುಂದೆ ಆಗುವಂತಹ ಅನಾಹುತಗಳನ್ನು ತಪ್ಪುವಂತೆ ಅಗತ್ಯ ಕ್ರಮಗಳನ್ನು ಎಲ್ಲಾ ತಂಡಗಳು ತೆಗೆದುಕೊಳ್ಳಬೇಕು ಹಾಗೂ ಮರಗಳ ತ್ಯಾಜ್ಯವನ್ನು ಸದರಿ ತಂಡಗಳೆ ತ್ವರಿತಗತಿಯಲ್ಲಿ ತೆರವುಗೊಳಿಸುವಂತೆ ಸೂಚಿಸಿದೆ. ತಪ್ಪಿದಲ್ಲಿ ಟೆಂಡರ್ ನಿಯಮಾವಳಿಗಳನ್ವಯ ಸಂಬಂಧ ಪಟ್ಟ ತಂಡಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ಮುಂದುವರೆದು ಪಾಲಿಕೆಯ ಘನ ತ್ಯಾಜ ನಿರ್ವಹಣೆಯ ಅಧಿಕಾರಿಗಳು ಮರಗಳಿಂದ ಶೇಖರಣೆಯಾಗುವ ತ್ಯಾಜ್ಯವನ್ನು ವಿಲೇಗೊಳಿಸುವ ಸಂಬಂಧ ಜರೂರಾಗಿ ಸೂಕ್ತ ಸ್ಥಳವನ್ನು ಗುರುತಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಸದರಿ ತ್ಯಾಜ್ಯವನ್ನು ವಿಲೇಗೊಳಿಸುವ ಸಂಬಂಧ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದೆ.
ವಲಯ ಮಟ್ಟದ ಅಭಿಯಂತರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಳೆ ಗಾಳಿಯಿಂದ ಬಿಳುವಂತಹ ಸಣ್ಣ ಗಿಡ ಮರಗಳನ್ನು ತಮ್ಮ ವಲಯ ಮಟ್ಟದಲ್ಲಿನ ನಿಯೋಜಿಸಲಾಗಿರುವ ಸಿಲ್ಟ್ ಅಂಡ್ ಟ್ರಾಕ್ಟರ್ ತಂಡಗಳಿಂದ ವಿಲೇಗೊಳಿಸುವುದು ಹಾಗೂ ಮರಗಳು ಮತ್ತು ಅದರ ರೆಂಬೆ/ಕೊಂಬೆಗಳನ್ನು ಅರಣ್ಯ ಇಲಾಖೆವತಿಯಿಂದ ತ್ವರಿತಗತಿಯಲ್ಲಿ ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸಲು ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.