ಬೆಂಗಳೂರು: ನಗರದ ಯಲಹಂಕ ವಲಯ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿ ಜಾಲಾವೃತವಾಗಿದ್ದು, ಕೂಡಲೆ ತುರ್ತು ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಲು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಲಹಂಕ ವಲಯ ವ್ಯಾಪ್ತಿಯಲ್ಲಿ ಮಳೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಯಲಹಂಕ ವಲಯ ವ್ಯಾಪ್ತಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರೀ ಮಳೆಯಿಂದಾಗಿ ಜಾಲಾವೃತವಾಗಿರುವ ಪ್ರದೇಶಗಳಲ್ಲಿ ಕೂಡಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಹೆಚ್ಚು ಸಮಸ್ಯೆಯಿರುವ ಕಡೆ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವುದು. ಬಾಧಿತ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಅಧಿಕಾರಿಗಳು ಕೂಡಲೆ ಸ್ಪಂದಿಸಿ ಕುಡಿಯುವ ನೀರು, ಹಾಲು, ಬಿಸ್ಕೆಟ್, ಊಟದ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸೂಚನೆ ನೀಡಿದರು.
ಭದ್ರಪ್ಪ ಲೇವಟ್, ಟಾಟಾ ನಗರ ಸೇರಿದಂತೆ ಹೆಚ್ಚು ನೀರು ನಿಂತಿರುವ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 10-15 ಹೆಚ್.ಪಿ ಪಂಪ್‌ಗಳು ಹಾಗೂ ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಿಕೊಂಡು ನೀರನ್ನು ಹೊರ ಹಾಕಬೇಕು. ಇನ್ನು ರಾಜಕಾಲುವೆಗಳ ಪ್ರಮುಖ ಸ್ಥಳಗಳಲ್ಲಿ ಜೆಸಿಬಿಗಳನ್ನಿಟ್ಟು, ರಾಜಕಾಲುವೆಗಳನ್ನು ಸಂಪೂರ್ಣ ಸ್ವಚ್ಛ ಮಾಡಿ ಇರುವ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಎಂದು ಹೇಳಿದರು.
ಹೆಚ್ಚು ಜಲಾವೃತವಾಗಿರುವ ಪ್ರದೇಶಗಳಲ್ಲಿ ಪಾಲಿಕೆ ಅಧಿಕಾರಿಗಳು, ಬೆಸ್ಕಾಂ, ಪೊಲೀಸ್, ಅಗ್ನಿಶಾಮಕ, ಎನ್.ಡಿ.ಆರ್.ಎಫ್, ಎಸ್,ಡಿ.ಆರ್.ಎಫ್ ಅಧಿಕಾರಿ/ಸಿಬ್ಬಂದಿಗಳು ಸ್ಥಳದಲ್ಲಿದ್ದು, ಇರುವ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು. ಎಸ್.ಡಿ.ಆರ್.ಎಫ್/ ಎನ್.ಡಿ.ಆರ್.ಎಫ್ ನಿಂದ ಫ್ಲಡ್ ಲೈಟ್ಸ್ ವ್ಯವಸ್ಥೆ ಮಾಡಿಕೊಂಡು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ನೀರನ್ನು ಹೊರ ಹಾಕಿ ಎಂದರು.
ನಗರದ ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ತಗ್ಗು ಪ್ರದೇಶದಲ್ಲಿರುವ ಮಳೆಗಳ ನಿವಾಸಿಗಳಿಗೆ ಮುಂಚಿತವಾಗಿಯೇ ಸುರಕ್ಷಿತವಾಗಿರಲು ಮಾಹಿತಿ ತಿಳಿಸಬೇಕು. ಜೊತೆಗೆ ತುಂಬಿರುವ ಕೆರೆಗಳು ಹಾಗೂ ಕೆಳಭಾಗದ ಕೆರೆಗಳಲ್ಲಿ ನೀರು ಹೊರಹಾಕಿ ಜಲಾವೃತವಾಗದಂತೆ ಮುಂಜಾಗ್ರತಾ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಹೆಚ್ಚುವರಿ ಐ.ಎ.ಎಸ್/ಕೆ.ಎ.ಎಸ್ ಅಧಿಕಾರಿಗಳ ನಿಯೋಜನೆ: ಯಲಹಂಕ ವಲಯ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿರುವ ಕಾರಣ ಹೆಚ್ಚುವರಿಯಾಗಿ ಮೇಲ್ವಿಚಾರಣೆಗಾಗಿ ಪಾಲಿಕೆ ಇತರೆ ವಲಯಗಳ ಐ.ಎ.ಎಸ್, ಕೆ.ಎ.ಎಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಒಬ್ಬೊಬ್ಬ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿಯನ್ನು ನೀಡಿ ಸ್ಥಳಿಯ ನಿವಾಸಿಗಳಿಗೆ ಕೂಡಲೆ ಸ್ಪಂದಿಸುವ ಕೆಲಸ ಮಾಡಬೇಕು. ಜೊತೆಗೆ ಇರುವ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನಿಡಿದರು.
ಸಭೆಯಲ್ಲಿ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಪಲ್ಲವಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.