ಚಾಮರಾಜನಗರ: ಗಾರೆ ಕೆಲಸ ಮಾಡುತ್ತಿದ್ದ ವಿವಾಹಿತನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಗರದ ಹೊರ ವಲಯದ ಬೇಡರಪುರ ಬಳಿ ನಡೆದಿದೆ.
ಚಾಮರಾಜನಗರದ ಚೆನ್ನಿಪುರಮೋಳೆ ಬಡಾವಣೆ ನಿವಾಸಿ ಕಿರಣ್ (24) ಮೃತ ದುರ್ದೈವಿ. ಈತ ವಿವಾಹಿತನಾಗಿದ್ದು, ಒಂದೂವರೆ ವರ್ಷದ ಹೆಣ್ಣು ಮಗು ಸಹ ಇದೆ. ಈತ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು.
ಎಂದಿನಂತೆ ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಕುಟುಂಬದವರು ಭಯಗೊಂಡು ಹುಡುಕಾಟ ನಡೆಸಿದ್ದರು. ಈ ವೇಳೆ ಮೊಬೈಲ್ಗೆ ಕರೆ ಮಾಡಿದಾಗ ರಿಂಗ್ ಆಗುತ್ತಿತ್ತಾದರೂ ಅತ್ತ ಕಡೆಯಿಂದ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ.
ಈ ನಡುವೆ ಮಂಗಳವಾರ ಬೆಳಗ್ಗೆ ಬೇಡರಪುರ ಬಳಿಯ ರೈಲ್ವೆ ಹಳಿಯ ಬಳಿ ಈತನ ಬೈಕ್ ಹಾಗೂ ಮೃತ ದೇಹ ಕಂಡು ಬಂದಿದ್ದು, ಚಾಮರಾಜನಗರದಿಂದ ಮೈಸೂರಿಗೆ ತೆರಳುವ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ಸಂಶಯಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ನಂಜನಗೂಡು ರೈಲ್ವೆ ಠಾಣೆಯ ಎಎಸ್ ಐ ವಾಸಮೂರ್ತಿ, ಸಾಗರ್, ಮಹದೇವ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಸಿಮ್ಸ್ ಬೋಧನಾ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.