ಬಳ್ಳಾರಿ: ರಾಜ್ಯಾದ್ಯಂತ ಗ್ರಾಮೀಣ ಬ್ಯಾಂಕುಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ಹಾಗೂ ಸಮಸ್ಯೆಯ ಬಗ್ಗೆ ರಾಜ್ಯದ ಸಾವಿರಾರು ರೈತರು ಎತ್ತು ಗಾಡಿ ಸಮೇತ ಬೆಳೆದ ಉತ್ಪನ್ನಗಳ ಜತೆ ಮೆರವಣಿಗೆಯಲ್ಲಿ ಸಾಗಿ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮುಖ್ಯ ಆಡಳಿತ ಕಚೇರಿ ಮುತ್ತಿಗೆ ಹಾಕಿದರು. ಕಚೇರಿಯ ಮುಖ್ಯ ದ್ವಾರಕೆ ಬೀಗ ಜಡಿದು ಬಿಸಿಲಿನಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.
ರಾಜ್ಯದ ಎಲ್ಲ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಎಸ್‌ಬಿಎಂ ರೀತಿಯಲ್ಲಿ ಒಟಿಎಸ್ ಸಾಲ ತಿರುವಳಿ ಪದ್ಧತಿ ಜಾರಿಗೆ ತರಬೇಕು. ಸಾಲ ವಸೂಲಿಗಾಗಿ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಮೊಕದ್ದಮೆಗಳನ್ನು ವಾಪಸ್ ಪಡೆದು ಒಟಿಎಸ್‌ನಲ್ಲಿ ತಿರುವಳಿ ಮಾಡಬೇಕು. ರೈತರು ಗಿರಿವಿ ಇಟ್ಟಿರುವ ಚಿನ್ನ ಆಭರಣಗಳನ್ನು ಕೃಷಿ ಸಾಲದ ನೆಪ ಹೇಳದೆ ಕೂಡಲೇ ಬಿಡುಗಡೆ ಗೊಳಿಸಬೇಕು ಎಂದು ಒತ್ತಾಯಿಸಿದರು.
ಸುಮಾರು ಮಧ್ಯಾಹ್ನ 3 ಗಂಟೆಗೆ ಪ್ರತಿಭಟನಾಕಾರರ ಬಳಿ ಬಂದ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಶಿವಶಂಕರ್ ಮಾತನಾಡಿ, ಏಪ್ರಿಲ್ 2 ರಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ರೈತ ಮುಖಂಡರ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಇಂದಿನ ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾದವರಡ್ಡಿ ವಹಿಸಿ ಮಾತನಾಡಿ, ಎರಡು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದರು ಗ್ರಾಮೀಣ ಬ್ಯಾಂಕ್‌ನವರು ನಿರ್ಲಕ್ಷತನ ವಹಿಸುತ್ತಿದ್ದಾರೆ. ಶ್ರೀಮಂತರಿಗೆ ಉದ್ಯಮಿಗಳಿಗೆ ಹೆಚ್ಚು ಸಾಲ ನೀಡಿ ಗ್ರಾಮೀಣ ಜನರ ಪರ ಎಂದು ಹೇಳುತ್ತಿದ್ದಾರೆ. ಇದು ರೈತ ದ್ರೋಹದ ಕೆಲಸ ಎಂದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಶ್ರೀಮಂತರ, ಬಂಡವಾಳ ಶಾಹಿಗಳ 14 ಲಕ್ಷ ಕೋಟಿ ರೂಪಾಯಿ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ಬಡವರು ರೈತರು ಸಂಕಷ್ಟದಲ್ಲಿ ಇದ್ದಾರೆ ಎನ್ನುವ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಕೊಡುವ ಹಣ ಇಲ್ಲದಂತಾಗಿದೆ. ಎಲ್ಲ ಸರ್ಕಾರಗಳು ರೈತರ ಕಣ್ಣಿಗೆ ಮಣ್ಣು ಎರಚುತ್ತಿವೆ. ಈ ರೀತಿಯ ಶೋಷಣೆಯಿಂದಲೇ ರೈತರು ಕೃಷಿಯಿಂದ ವಲಸೆ ಹೋಗುತ್ತಿದ್ದಾರೆ, ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ಹೇಳಿದರು.
ರಾಜ್ಯದ ಎಲ್ಲ ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಮರ್ಜಿಯಿಂದ ಹೊರಗೆ ಬಂದು ಒಟ್ಟಾಗಿ ಹೋರಾಟ ಮಾಡಿದರೆ ಖಂಡಿತವಾಗಿಯೂ ರೈತರಿಗೆ ನ್ಯಾಯ ಸಿಗುತ್ತದೆ. ಗ್ರಾಮೀಣ ಬ್ಯಾಂಕಿನವರು ಸಮಸ್ಯೆ ಬಗೆಹರಿಸಿದಿದ್ದರೆ ರಾಜ್ಯದ ಎಲ್ಲ ಶಾಖೆಗಳನ್ನು ಏಕಕಾಲದಲ್ಲಿ ಒಂದೇ ದಿನ ಬಂದ್ ಮಾಡುವ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯರೈತ ಸಂಘದ ಮಂಜೇಗೌಡ, ಬಲ್ಲೂರ್ ರವಿಕುಮಾರ್, ಅತ್ತಹಳ್ಳಿ ದೇವರಾಜ್, ಲಕ್ಷ್ಮಿದೇವಿ, ಮಲ್ಲಿಕಾರ್ಜುನರೆಡ್ಡಿ, ವಕೀಲರು, ಎನ್.ಎಚ್. ದೇವಕುಮಾರ ಸೇರಿದಂತೆ ಸಾವಿರಾರು ರೈತರು ಇದ್ದರು.