ಬೆಂಗಳೂರು : 2023ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿರುವ ಬೆಂಗಳೂರು – ಮೈಸೂರು ಹೆದ್ದಾರಿ ಕೇವಲ ಪ್ರವೇಶ ನಿರ್ಬಂಧಿತ ರಾಷ್ಟ್ರೀಯ ಹೆದ್ದಾರಿ ಮಾತ್ರ. ಇದು ಎಕ್ಸ್‌ಪ್ರೆಸ್ ವೇ ಅಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸ್ಪಷ್ಟನೆ ನೀಡಿದೆ.
ಗಂಟೆಗೆ 100 ಕಿಮೀ ಗರಿಷ್ಠ ವೇಗ ಇರುವ ಹೆದ್ದಾರಿ ಇದಾಗಿದ್ದು, ಗಂಟೆಗೆ 120 ಕಿಮೀ ಗರಿಷ್ಠ ವೇಗ ಹೊಂದಿರುವ ಎಕ್ಸ್‌ಪ್ರೆಸ್ ವೇ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ಹಿನ್ನೆಲೆ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿಮೀ ದಾಟುವ ವಾಹನ ಸವಾರರಿಗೆ ದಂಡ ವಿಧಿಸಲು ಶುರು ಮಾಡಿದ ಬಳಿಕ ಹೆದ್ದಾರಿ ಪ್ರಾಧಿಕಾರದಿಂದ ಈ ಸ್ಪಷ್ಟನೆ ಹೊರಬಿದ್ದಿದೆ.
ಪೊಲೀಸರು ಹಾಗೂ ಹೆದ್ದಾರಿ ಪ್ರಾಧಿಕಾರದ ದಂಡ ವಿಧಿಸುವ ಕ್ರಮಕ್ಕೆ ಹಲವು ವಾಹನ ಸವಾರರು ಆಕ್ಷೇಪ ವ್ಯಕ್ತಪಡಿಸಿ, ಇದು ಎಕ್ಸ್‌ಪ್ರೆಸ್ ವೇ ಇಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಸಂಚರಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಾದಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್, ನಮ್ಮ ಅಧಿಸೂಚನೆಯಲ್ಲಿ ಇದು ಪ್ರವೇಶ ನಿರ್ಬಂಧಿತ ಹೆದ್ದಾರಿಯೇ ಹೊರತು ಎಕ್ಸ್‌ಪ್ರೆಸ್ ವೇ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಹೆದ್ದಾರಿಯನ್ನು ಗಂಟೆಗೆ ಗರಿಷ್ಠ 100 ಕಿಮೀ ವೇಗಕ್ಕೆ ರೂಪಿಸಲಾಗಿದೆಯೇ ಹೊರತು 120 ಕಿಮೀ ವೇಗಕ್ಕೆ ಅಲ್ಲ. ಹೆದ್ದಾರಿ ಮೂಲಸೌಕರ್ಯ ಎಕ್ಸ್‌ಪ್ರೆಸ್ ವೇ ರೀತಿ ಇರುವುದರಿಂದ ಜನರು ಎಕ್ಸ್‌ಪ್ರೆಸ್ ವೇ ಎಂದು ಕರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರವೇಶ ನಿರ್ಬಂಧಿತ ಹೆದ್ದಾರಿಯಾಗಿರುವುದರಿಂದ ಗರಿಷ್ಠ ವೇಗದ ಮಿತಿಯನ್ನು ಮೀರುವ ವಾಹನಗಳಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. 80 ರಿಂದ 100 ಕಿಮೀ ವೇಗದಲ್ಲಿ ಸಂಚರಿಸುವ ವಾಹನಗಳನ್ನು ಬಿಟ್ಟು ಆಟೋ, ಬೈಕ್‌ಗಳು ಮತ್ತು ನಿಧಾನಗತಿಯ ವಾಹನಗಳನ್ನು ಹೆದ್ದಾರಿಗೆ ನಿಷೇಧಿಸಿ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ ಎಂದು ವಿವೇಕ್ ಜೈಸ್ವಾಲ್ ಹೇಳಿದ್ದಾರೆ.
ಎಕ್ಸ್‌ಪ್ರೆಸ್ ವೇಗಳು ಹೆದ್ದಾರಿಗಳಿಗಿಂತ ಹೆಚ್ಚು ಅಗಲವಾದ ಲೇನ್ ಅನ್ನು ಹೊಂದಿರುತ್ತವೆ. ಜೊತೆಗೆ ಅನೇಕ ವೈಶಿಷ್ಟತೆಗಳೊಂದಿಗೆ ನಿರ್ಮಿಸಲಾಗಿತರುತ್ತದೆ. ಎಕ್ಸ್‌ಪ್ರೆಸ್ ವೇಗಳ ಗರಿಷ್ಠ ವೇಗದ ಮಿತಿ ಗಂಟೆಗೆ 120 ಕಿಮೀ ಇದ್ದರೆ, ಹೆದ್ದಾರಿಗಳಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿಮೀ ಇರುತ್ತದೆ.
ಎಕ್ಸ್‌ಪ್ರೆಸ್ ವೇ ಎಂದು ಮೋದಿ ಟ್ವೀಟ್ ಮಾಡಿದ್ದರು!: ಪ್ರಧಾನಿ ನರೇಂದ್ರ ಮೋದಿಯವರು ಈ ಹೆದ್ದಾರಿಯನ್ನು ಮಾರ್ಚ್ 13ರಂದು ಉದ್ಘಾಟಿಸಿದ್ದು, ಅಂದು ತಮ್ಮ ಟ್ವೀಟ್‌ನಲ್ಲಿ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಎಂದೇ ಉಲ್ಲೇಖಿಸಿದ್ದಾರೆ.
ಇನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಈ ಹೆದ್ದಾರಿಯನ್ನು ಎಕ್ಸ್‌ಪ್ರೆಸ್ ವೇ ಎಂದಲೇ ಉಲ್ಲೇಖಿಸಿ ಅನೇಕ ಬಾರಿ ಮಾಹಿತಿಯನ್ನು ನೀಡಿದ್ದಾರೆ. ಅದಲ್ಲದೇ ಎಕ್ಸ್‌ಪ್ರೆಸ್ ವೇನ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಬಿಜೆಪಿ ಸರ್ಕಾರ ಕೂಡ ಈ ಹೆದ್ದಾರಿಯನ್ನು ಎಕ್ಸ್‌ಪ್ರೆಸ್ ವೇ ಎಂದು ನಮೂದಿಸಿಯೇ ಜಾಹೀರಾತನ್ನು ನೀಡಿತ್ತು.
ಎಐ ಆಧಾರಿತ ಕ್ಯಾಮೆರಾಗಳು ಹಾಗೂ ಇಂಟರ್‌ಸೆಪ್ಟರ್‌ಗಳನ್ನು ಪೊಲೀಸರು ವೇಗ ಮಿತಿ ಮೇಲೆ ನಿಯಂತ್ರಣಕ್ಕೆ ತರಲು ಬಳಸುತ್ತಿದ್ದಾರೆ. ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ಕೂಡ ಬೆಂಗಳೂರು ಮೈಸೂರಿನ ನಡುವೆ ಇರುವ ಆರು ಲೇನ್ ಹೆದ್ದಾರಿಯು ಎಕ್ಸ್‌ಪ್ರೆಸ್ ವೇ ಅಲ್ಲ ಎಂದು ಹೇಳಿದ್ದರು. ಇದು ಪ್ರವೇಶ ನಿರ್ಬಂಧಿತ ರಾಷ್ಟ್ರೀಯ ಹೆದ್ದಾರಿ 275 ಆಗಿದ್ದು, ಎನ್‌ಎಚ್‌ಎಐನಿಂದ ನಿರ್ವಹಣೆಯಾಗುತ್ತಿದೆ ಎಂದಿದ್ದರು.