- ಮಕ್ಕಳಿಂದ 80 ವರ್ಷದ ವಯೋ ವೃದ್ಧರು ಭಾಗಿಯಾಗಿ ನಡಿಗೆ ಯಶಸ್ವಿಗೊಳಿಸಿದ ಕ್ಷಣ ರೋಮಾಂಚನ
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಇಂದು “ಪ್ರಾಜೆಕ್ಟ್ ವಾಕಲೂರು” ನಡಿಗೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನಿಡಿದರು.

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 34 ಕಿ.ಮೀ ನಡಿಗೆ ಪೂರ್ಣ: ಇಂದಿನ ಫುಟ್ಪಾತ್ ವಾಕ್ ನೊಂದಿಗೆ ಬೆಂಗಳೂರು ನಗರದಲ್ಲಿ ವಾಕಲೂರು ಯೋಜನೆಯಡಿ ಒಟ್ಟಾರೆಯಾಗಿ 72 ಕಿ.ಮೀ ಪಾದಚಾರಿ ಮಾರ್ಗದ ನಡಿಗೆಯನ್ನು ಪೂರ್ಣಗೊಳಿಸಾಲಾಗಿದ್ದು, ಅದರಲ್ಲಿ ಈಗಾಗಲೇ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬಾಣಸವಾಡಿಯಲ್ಲಿ 5 ಕಿ.ಮೀ., ಥಣಿಸಂದ್ರದಲ್ಲಿ 7 ಕಿ.ಮೀ., ಯಲಹಂಕದಲ್ಲಿ 10 ಕಿ.ಮೀ. ಮತ್ತು ಹೆಬ್ಬಾಳದ ಆರ್ ಟಿ ನಗರದಲ್ಲಿ 7 ಕಿ.ಮೀ., ಹಾಗೂ ಹೊಸ ವರ್ಷದ ಆರಂಭದ ದಿನದಂದು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಜೆ.ಸಿ. ನಗರ ದಿಂದ ಮೇಖ್ರಿ ವೃತ್ತ ಪ್ರದೇಶಗಳಲ್ಲಿ ಪಾದಚಾರಿ ನಡಿಗೆಯನ್ನು ಕೈಗೊಳ್ಳಲಾಗಿತ್ತು. ಇಂದಿನ 5.2 ಕಿ.ಮೀ ಸೇರಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ 34 ಕಿ.ಮೀ ಪಾದಚಾರಿ ನಡಿಗೆ ಪೂರ್ಣಗೊಂಡಂತಾಗಿದೆ ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಇದೇ ವೇಳೆ ಮಾಹಿತಿ ನೀಡಿದರು.
ಫುಟ್ ಪಾತ್ ವಾಕ್ ಸಾಗಿದ ಮಾರ್ಗ: ಇಂದಿನ ಫುಟ್ಪಾತ್ ವಾಕ್ ಕಮ್ಮನಹಳ್ಳಿ/ ಕಲ್ಯಾಣ ನಗರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು. 5 ಕಿ.ಮೀ ನಿರಂತರ ಪಾದಚಾರಿ ನಡಿಗೆ ಕಮ್ಮನಹಳ್ಳಿ ಮುಖ್ಯ ರಸ್ತೆಯಿಂದ ಹೊರ ವರ್ತುಲ ರಸ್ತೆಯ ಜಂಕ್ಷನ್ ವರೆಗೆ ಸಾಗಿ ಕಲ್ಯಾಣ ನಗರದ ಸಿಎಂಆರ್ ರಸ್ತೆ ಪ್ರವೇಶಿಸಿ ಹತ್ತಿರದ ಕೆಲ ರಸ್ತೆಗಳಲ್ಲಿ ಸಂಚರಿಸಿತು.
ಫುಟ್ಪಾತ್ ವಾಕ್ ಉದ್ದೇಶ: ವಾಕಲೂರು ಯೋಜನೆಯ ಉದ್ದೇಶ ನಾಗರಿಕರು ಸ್ಥಿರ ಪಾದಚಾರಿ ಮಾರ್ಗಗಳಲ್ಲಿ ನಡೆಯುವುದು ಮತ್ತು ಈ ಸಮಯದಲ್ಲಿ ದಾರಿಯಲ್ಲಿನ ಪ್ರಮುಖ ಅಡೆತಡೆಗಳನ್ನು ಗುರುತಿಸುವುದಾಗಿದ್ದು, ಎಲ್ಲಾ ಪ್ರಮುಖ ಅಡೆತಡೆಗಳಲ್ಲಿ ಪಾದಚಾರಿಗಳನ್ನು ನಿಲ್ಲಿಸಿ ಛಾಯಾಚಿತ್ರ ತೆಗೆಯಲು ಹೇಳಿ ಮತ್ತು ಅಡೆತಡೆಗಳ ಸಂಖ್ಯೆಯನ್ನು ಅವರಿಂದಲೇ ಗುರುತಿಸುವುದಾಗಿದೆ.
ಇಂದಿನ ನಡಿಗೆ ಕಾರ್ಯಕ್ರಮ ಆರಂಭವಾಗುವುದಕ್ಕೂ ಮೊದಲು ನೀವು ಎಷ್ಟು ಅಡೆತಡೆಗಳನ್ನು ಎದುರಿಸಬಹುದು ಎಂದು ಆಯೋಜಕರು ನಾಗರೀಕರನ್ನು ಪ್ರಶ್ನಿಸಿದಾಗ ಹೆಚ್ಚಿನವರು ಸರಿಸುಮಾರು 25 ಸಮಸ್ಯೆಗಳನ್ನು ಗುರುತಿಸಬಹುದು ಎಂದು ಹೇಳಿದರು.
ನಡಿಗೆ ವೇಳೆ ಕಂಡ ಅಡೆತಡೆಗಳ ಮಾಹಿತಿ: 1. ಕಸವನ್ನು ಎಸೆದಿರುವ ಸ್ಥಳಗಳ ಸಂಖ್ಯೆ: 0, 2) ತೆರೆದ ಮೂತ್ರ ವಿಸರ್ಜನಾ ಸ್ಥಳಗಳ ಸಂಖ್ಯೆ: 0, 3)ಮುರಿದ ಪಾದಚಾರಿ ಮಾರ್ಗದ ಚಪ್ಪಡಿಗಳು/ ಕಾಣೆಯಾದ ಚಪ್ಪಡಿಗಳ ಸಂಖ್ಯೆ: 0, 4) ಪಾದಚಾರಿ ಮಾರ್ಗವನ್ನು ನಿರ್ಬಂಧಿಸುವ ಪಾರ್ಕ್ ಮಾಡಿದ ದ್ವಿಚಕ್ರ ವಾಹನಗಳ ಸಂಖ್ಯೆ: 0
5) ಪಾದಚಾರಿ ಮಾರ್ಗವನ್ನು ನಿರ್ಬಂಧಿಸುವ ಪಾರ್ಕ್ ಮಾಡಿದ ಕಾರುಗಳ ಸಂಖ್ಯೆ: 1, 6) ಪಾದಚಾರಿ ಮಾರ್ಗವನ್ನು ನಿರ್ಬಂಧಿಸುವ ನಿರ್ಮಾಣ ಸಾಮಗ್ರಿಗಳಿರುವ ಸ್ಥಳಗಳ ಸಂಖ್ಯೆ: 0, 7) ಪಾದಚಾರಿ ಮಾರ್ಗವನ್ನು ನಿರ್ಬಂಧಿಸುವ ಅಂಗಡಿಗಳು ಅಥವಾ ಮಾರಾಟಗಾರರ ಸಂಖ್ಯೆ: 0, 8) ಅತಿಕ್ರಮಣಗಳ ಸಂಖ್ಯೆ: 2 (1 ದೇವಾಲಯ + 1 ಮೊಕದ್ದಮೆ ಹೂಡಿರುವ ಆಸ್ತಿ), 9) ಬೆಸ್ಕಾಂ ಅಡೆತಡೆಗಳ ಸಂಖ್ಯೆ : 1 ಇತ್ತು.
ಒಟ್ಟಾರೆಯಾಗಿ 5 ಕಿ.ಮೀ. ನಡಿಗೆಯಲ್ಲಿ 5ಕ್ಕಿಂತ ಕಡಿಮೆ ಅಡೆತಡೆಗಳು ಎದುರಾದವು, ಅವುಗಳಲ್ಲಿ ಎಲ್ಲಿಯೂ ಕಸದ ರಾಶಿ, ಮೂತ್ರ ವಿಸರ್ಜನಾ ಸ್ಥಳಗಳು ಅಥವಾ ಹಾಳಾದ ಪಾದಚಾರಿ ಮಾರ್ಗಗಳು/ ಕಾಣೆಯಾದ ಚಪ್ಪಡಿಗಳು ಕಂಡು ಬರಲಿಲ್ಲ ಎಂದು ತಿಳಿಸಿದ್ದಾರೆ.
ಇಂದಿನ ನಡಿಗೆ ಕಾರ್ಯಕ್ರಮದ ಮುಖ್ಯಾಂಶ: ವಾರ್ಡ್ ತಂಡಗಳು ಪೇವರ್ ಬ್ಲಾಕ್‌ಗಳ ಮೇಲೆ ವರ್ಣರಂಜಿತ ವಿನ್ಯಾಸಗಳನ್ನು ಚಿತ್ರಿಸಿರುವುದು ಕಂಡುಬಂದಿತು, ಇದರಲ್ಲಿ ಕುಂಟೆ ಬಿಲ್ಲೆ (ಹಾಪ್‌ಸ್ಕಾಚ್) ಮತ್ತು ಕೆರೆ ದಡ (ಸರೋವರ/ ತೀರ) ಅಂತಹ ಆಟಗಳೂ ಸೇರಿದ್ದವು. ಇಲ್ಲಿ ಸಣ್ಣ ಮಕ್ಕಳು ಹಿರಿಯ ನಾಗರಿಕರು ಸೇರಿದಂತೆ ಆಟವಾಡಿದ್ದು ಎಲ್ಲರಲ್ಲಿಯೂ ಉತ್ಸಾಹವನ್ನು ತಂದಿತು.
ಪಾದಚಾರಿಗಳ ಸುರಕ್ಷತೆಗಾಗಿ ಟ್ರಾನ್ಸ್‌ಫಾರ್ಮರ್‌ಗಳಲ್ಲಿನ ಸ್ವಿಚ್‌ಗಳ ಸ್ಥಳ ಬದಲಾವಣೆ: ಪಾದಚಾರಿಗಳ ಸುರಕ್ಷತೆಗಾಗಿ ಬೆಸ್ಕಾಂ ತಂಡ ವಿದ್ಯುತ್ ಕಂಬಗಳ ಟ್ರಾನ್ಸ್‌ಫಾರ್ಮರ್‌ಗಳಲ್ಲಿನ ಸ್ವಿಚ್‌ಗಳ ಎತ್ತರವನ್ನು ಹೆಚ್ಚಿಸಿರುವುದು ನಡಿಗೆಯ ವೇಳೆ ಕಂಡುಬಂದಿತು. ಇದು ಇಡೀ ಬೆಂಗಳೂರಿನಲ್ಲಿ ಮೊದಲ ಬಾರಿ ಮಾಡಿರುವ ಉದಾಹರಣೆಯಾಗಿದೆ. ಹಿಂದಿನ ನಡಿಗೆಗಳಲ್ಲಿ ಇಂತಹ ಅಡೆತಡೆಗಳ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಬೆಸ್ಕಾಂ ಸಿಬ್ಬಂದಿಗಳ ಕೆಲಸವನ್ನು ಇಂದಿನ ವಾಕಲೂರು ನಡಿಗೆಯ ವೇಳೆ ನಾಗರೀಕರು ಗುರುತಿಸಿ ಸಂತಸ ವ್ಯಕ್ತಪಡಿಸಿದರು.
ನೆದರ್‌ಲ್ಯಾಂಡ್ಸ್ ಪ್ರಜೆಗಳ ಪ್ರಶಂಸೆ: ನೆದರ್‌ಲ್ಯಾಂಡ್ಸ್ ದೇಶದ ನಾಗರೀಕರು ಕಾರ್ಯಕ್ರಮದ ಕುರಿತು ಮಾತನಾಡಿ, ಇಲ್ಲಿರುವ ಪಾದಚಾರಿ ಮಾರ್ಗಗಳು ನಮ್ಮ ದೇಶಕ್ಕಿಂತ ಉತ್ತಮವಾಗಿವೆ. ಸುಗಮವಾಗಿ ನಡೆಯಲು ಸಹಕಾರಿಯಾಗಿವೆ. ಎಲ್ಲೆಡೆಯೂ ಸ್ವಚ್ಛತೆಯನ್ನು ಕಾಪಾಡಲಾಗಿದ್ದು ಗುಣಮಟ್ಟವನ್ನು ಕೂಡ ಕಾಯ್ದುಕೊಂಡು ಬರಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಆಯೋಜಕರ ಮಾತು: ವಾಕಲೂರು (Walkaluru) ಯೋಜನೆಯ ಸಂಯೋಜಕರಾದ ಶ್ರೀ ಅರುಣ್ ಪೈ ಮಾತನಾಡಿ ಇಂದಿನ 9ನೇ ಆವೃತ್ತಿಯ ಫುಟ್ಪಾತ್ ವಾಕ್ 5 ಕಿ.ಮೀ ಕ್ರಮಿಸಿತು. ಯೋಜನೆ ಅಡಿ ಇಲ್ಲಿಯವರೆಗೆ 72 ಕಿ.ಮೀ ನಡಿಗೆಯನ್ನು ಪೂರೈಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ 100 ಕಿ.ಮೀ ಪೂರೈಸುವ ಉದ್ದೇಶವಿದೆ. ಎಲ್ಲಾ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿಯೂ ಈ ಕಾರ್ಯಕ್ರಮವನ್ನು ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಪಾಲಿಕೆಯ ಅಧಿಕಾರಿಗಳು ನಾಗರಿಕರಿಗೆ ತಮ್ಮ ಪಾದಚಾರಿ ಮಾರ್ಗಗಳನ್ನು ಪರೀಕ್ಷಿಸಲು ಮುಕ್ತ ಸವಾಲುಗಳನ್ನು ಒಡ್ಡಿದಾಗ, ಅವರು ತಮ್ಮ ಮೂಲಸೌಕರ್ಯದ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎನ್ನುವುದು ತಿಳಿದು ಬರುತ್ತದೆ. ಇದರಿಂದ ಅವರಿಗೂ ತಮ್ಮ ಕೆಲಸದ ಬಗ್ಗೆ ಹೆಮ್ಮೆಯಾಗುತ್ತದೆ. ನಾಗರೀಕರೊಂದಿಗೆ ತೊಡಗಿಸಿಕೊಂಡು ಇನ್ನಷ್ಟು ಸೇವೆಯನ್ನು ಉತ್ತಮಪಡಿಸುವುದರ ಉತ್ಸುಕತೆಯನ್ನೂ ಇದು ತೋರ್ಪಡಿಸುತ್ತದೆ. ಒಟ್ಟಿನಲ್ಲಿ ಪ್ರಾಜೆಕ್ಟ್ ವಾಕಲೂರು ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ಬೆಂಗಳೂರಿನ ನಾಗರೀಕರು ಮತ್ತು ಸರ್ಕಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಅಭಿಪ್ರಾಯಪಟ್ಟರು
ಈ 5 ಕಿ.ಮೀ. ನಡಿಗೆ ಕಾರ್ಯಕ್ರಮದಲ್ಲಿ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೋಮಿನ್ ಹಾಜರಿದ್ದರು. ಆಯುಕ್ತರು ಹಾಗೂ ಜಂಟಿ ಆಯುಕ್ತರು 120ಕ್ಕೂ ಹೆಚ್ಚು ನಡಿಗೆದಾರರ ಜೊತೆ ಹೆಜ್ಜೆ ಹಾಕಿದರು. ಸ್ಥಳೀಯ ನಿವಾಸಿಗಳ ಜತೆಗೆ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡಿಗೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳಿಂದ 80 ವರ್ಷದ ವಯೋ ವೃದ್ಧರು ಪೂರ್ತಿ ಮಾರ್ಗವನ್ನು ಪೂರ್ಣಗೊಳಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ನೆದರ್ಲ್ಯಾಂಡ್ ದೇಶದ ಇಬ್ಬರು ಪ್ರಜೆಗಳು ಸಹ ಜೊತೆಗೂಡಿದ್ದು ವಿಶೇಷವಾಗಿತ್ತು.
Related










