ಚನ್ನಪಟ್ಟಣ: ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ಮಾಡಿದ ಬಿಜೆಪಿ ಜೆಡಿಎಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು. ಡಿ.ಕೆ.ಶಿವಕುಮಾರ್ ನೋಟು, ನಿಖಿಲ್ ಕುಮಾರಸ್ವಾಮಿಗೆ ಓಟು ಎಂದು ಘೋಷಣೆ ಮೊಳಗಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ ರಾಮನಗರ ಜಿಲ್ಲೆಯ ಸಮಗ್ರವಾದ ಅಭಿವೃದ್ಧಿಯಾಗಿದ್ದು ಯಡಿಯೂರಪ್ಪ ಹಾಗೂ ನಾನು ಮುಖ್ಯ ಮಂತ್ರಿಗಳಾಗಿದ್ದಾಗ ಮಾತ್ರ.. ಇನ್ನು ಚನ್ನಪಟ್ಟಣ ಮತ್ತು ರಾಮನಗರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಕಿಡಿ ಕಾರಿದರು.
ರಾಮನಗರ ಜಿಲ್ಲೆಯ ಹೆಸರು ಬದಲಿಸಿ ಬೆಂಗಳೂರು ಸೌಥ್ ಜಿಲ್ಲೆ ಮಾಡಲು ಬಿಜೆಪಿ ಜೆಡಿಎಸ್ ಪಕ್ಷಗಳು ಬಿಡಲ್ಲ, ಚನ್ನಪಟ್ಟಣ ರಾಮನಗರ ಪಟ್ಟಣಗಳನ್ನು ಒಗ್ಗೂಡಿಸಿ ಬೃಹತ್ ಮಹಾನಗರ ಪಾಲಿಕೆ ಮಾಡಿ ಅವಳಿ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಕುಮಾರಸ್ವಾಮಿ ಘೋಷಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ನಿಖಿಲ್ ಗೆಲುವಿಗೆ ಸಂಕಲ್ಪ ಮಾಡಿ ದುಡಿಯುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣ ಕ್ಷೇತ್ರದ ಜನತೆಯ ಮಡಿಲಿಗೆ ಹಾಕಿದ್ದೇನೆ. ಖಂಡಿತವಾಗಿಯೂ ನಿಖಿಲ್ ಗೆ ವಿಜಯಮಾಲೆ ತೊಡಿಸಿ ಹೆಚ್ಚು ಮತಗಳ ಅಂತರದ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸುತ್ತಾರೆ ಎಂಬ ವಿಶ್ವಾಸ ವ್ಯಪಡಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ರಾಮನಗರ ಚನ್ನಪಟ್ಟಣ ಅಭಿವೃದ್ಧಿಗೆ ಡಿ.ಕೆ.ಶಿವಕುಮಾರ್ ಕೊಡುಗೆ ಶೂನ್ಯ, ಸರ್ಕಾರಿ ನೌಕರರಿಗೆ ಸಂಬಳ ನೀಡಲು ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲ. ರಾಮನಗರ ಜಿಲ್ಲೆಯ ಹೆಸರು ಬದಲಿಸಿ ಗ್ರೇಟರ್ ಬೆಂಗಳೂರು ಮಾಡಿ ಬೆಂಗಳೂರು ಸೌಥ್ ಎಂದು ಹೆಸರು ಬದಲಿಸಲು ಕಾಂಗ್ರೆಸ್ ಪಕ್ಷ ಸಂಚು ನಡೆಸಿದೆ, ಅದಕ್ಕೆ ಎನ್‌ಡಿಎ ಅವಕಾಶ ನೀಡಲ್ಲ ಎಂದರು.
ಮಾಜಿ ಸಚಿವ ಡಾ. ನಾರಾಯಣಗೌಡ ಮಾತನಾಡಿ ಬಿಜೆಪಿ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ಹಗಲು ರಾತ್ರಿಯೆನ್ನದೆ ಒಗ್ಗಟ್ಟಾಗಿ ದುಡಿಯುತ್ತಿದ್ದಾರೆ. ನಾನು ರೇಷ್ಮೆ ಹಾಗೂ ತೋಟಗಾರಿಕೆ ಸಚಿವನಾಗಿದ್ದಾಗ ರಾಮನಗರದಲ್ಲಿ 20ಕೋಟಿ ರೂಪಾಯಿಗಳ ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರ ಸಹಕಾರದಿಂದ ಹಣ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ್ದು ಕಟ್ಟಡ ಮುಕ್ತಾಯ ಹಂತದಲ್ಲಿದೆ. ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದು ಕುಮಾರಣ್ಣ ಮತ್ತು ಯಡಿಯೂರಪ್ಪ ಎನ್ನುವುದು ಬಹಿರಂಗ ಸತ್ಯವಾಗಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಡಾ. ಮಂಜುನಾಥ್, ಮಾಜಿ ಸಚಿವ ಅಶ್ವಥ್ ನಾರಾಯಣ, ಮಂಡ್ಯ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಉಮೇಶ್, ಕೆ.ಆರ್.ಪೇಟೆ ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮಂಡ್ಯ ನಾಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಮುಖಂಡರಾದ ಕೈಗೋನಹಳ್ಳಿ ಕುಮಾರ್, ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಕೆ.ವಿನೋದ್ ಸೇರಿದಂತೆ ಸಾವಿರಾರು ಎನ್ ಡಿ ಎ ಕಾರ್ಯಕರ್ತರು ಭಾಗವಹಿಸಿದ್ದರು.