NEWSನಮ್ಮಜಿಲ್ಲೆನಮ್ಮರಾಜ್ಯ

ಬಿಗ್ ಬಾಸ್ ಮನೆಗೆ ಬೀಗ… ‌ಅದೇ ರೀತಿ ಬೆಂಗಳೂರಿನ ರಸ್ತೆ ಗುಂಡಿಗಳ ಯಾವಾಗ ಬಂದ್ ಮಾಡುತ್ತೀರಾ: ಸಿಎಂ, ಡಿಸಿಎಂಗೆ ಜೆಡಿಎಸ್‌ ಪ್ರಶ್ನೆ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಿಯಮಗಳ ಉಲ್ಲಂಘನೆ ನೆಪದಲ್ಲಿ ಬಿಡದಿಯ ಬಿಗ್ ಬಾಸ್ ಮನೆಗೆ ಬೀಗ ಹಾಕಿಸಿದ್ದೀರಿ. ಒಪ್ಪಿಕೊಳ್ಳೋಣ. ‌ಅದೇ ರೀತಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ ಸಿಎಂ ಸಿದ್ದರಾಮಯ್ಯ, ಡಿಸಿಎಂ
ಡಿ.ಕೆ.ಶಿವಕುಮಾರ್‌ ಅವರೇ.. ಎಂದು ಜೆಡಿಎಸ್‌ ಪ್ರಶ್ನಿಸಿದೆ.

ಈ ಬಗ್ಗೆ X ಮಾಡಿರುವ ಜೆಡಿಎಸ್‌, ಸರಣಿ ಪ್ರಶ್ನೆಗಳನ್ನು ಕೇಳಿದೆ. ಬೆಂಗಳೂರು ಗುಂಡಿಗಳನ್ನ ಯಾವಾಗ ಬಂದ್ ಮಾಡಿಸುತ್ತೀರಾ? ಯಾವಾಗ ಕಾಂಗ್ರೆಸ್ ಸರ್ಕಾರದ 60% ಕಮಿಷನ್ ದಂಧೆಗೆ ಬೀಗ ಹಾಕ್ತೀರಾ ಎಂದು ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ? ರಾಜ್ಯದ ಜನರ ಮೇಲೆ ನಿರಂತರವಾಗಿ ತೆರಿಗೆ ಬರೆ ಎಳೆದು ಲೂಟಿ ಹೊಡೆಯುತ್ತಿರುವುದಕ್ಕೆ ಯಾವಾಗ ಬೀಗ ಹಾಕುತ್ತೀರಾ?

ಬೆಲೆ ಏರಿಕೆಗಳ ಮೂಲಕ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ? ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯನ್ನು ತಡೆಯಲು ಯಾವ ರೀತಿ ಬೀಗ ಹಾಕಿಸುತ್ತೀರಾ?

ರಾಜ್ಯದ ಜನರ ತೆರಿಗೆ ಹಣವನ್ನು ಅಕ್ರಮವಾಗಿ ವಾಮಮಾರ್ಗಗಳ ಮೂಲಕ ನಿಮ್ಮ ಪಕ್ಷದ ಹೈಕಮಾಂಡ್’ಗೆ ಕಪ್ಪ ಒಪ್ಪಿಸುತ್ತಿರುವುದಕ್ಕೆ ಯಾವಾಗ ಬೀಗ ಹಾಕಿಸುತ್ತೀರಾ?

ರಾಜ್ಯ ಸರ್ಕಾರದ ಶೇ.60ರಷ್ಟು ಕಮಿಷನ್ ದಂಧೆಗೆ ಯಾವಾಗ ಬೀಗ ಹಾಕುತ್ತೀರಾ? ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಪುಢಾರಿಗಳು ನಡೆಸುತ್ತಿರುವ ಕ್ಯಾಸಿನೋ ದಂಧೆ, ಅಕ್ರಮಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ?

Advertisement

ಭ್ರಷ್ಟಾಚಾರದ ಕೂಪಗಳಾಗಿರುವ ಸರ್ಕಾರಿ ಇಲಾಖೆ, ಕಚೇರಿಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ ಎಂದು ಪ್ರಶ್ನೆಗಳ ಮಳೆಯನ್ನೇ ಸುರಿಸಿರುವ ಜೆಡಿಎಸ್‌ ಕೈಲಾಗದವರು ಮೈಪರಚಿ ಕೊಂಡಂತೆ ಇದೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಎಂದು ಕಿಡಿಕಾರಿದೆ.

ಬೆಂಗಳೂರನ್ನು ಗುಂಡಿಯೂರು ಮಾಡಿರುವ ಕಾಂಗ್ರೆಸ್‌ ಸರ್ಕಾರ: ಬೆಂಗಳೂರನ್ನು ಗುಂಡಿಯೂರು ಮಾಡಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ ಅವರ ನೇತೃತ್ವದಲ್ಲಿ ರಸ್ತೆ ಗುಂಡಿಗಳಲ್ಲಿ ಗಿಡ ನೆಟ್ಟು ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗೋವಿಂದರಾಜ ನಗರದ ಪೇಟೆ ಚೆನ್ನಪ್ಪ ಕೈಗಾರಿಕಾ ಪ್ರದೇಶದ ಮಾಗಡಿ ಮುಖ್ಯ ರಸ್ತೆಯಲ್ಲಿ ಯಮ ಗುಂಡಿಗಳಿಗೆ ಮೂವರು ಅಮಾಯಕರು ಬಲಿಯಾಗಿದ್ದರು. ಆ ಸ್ಥಳದಲ್ಲಿ ಕಾಂಕ್ರೀಟ್ ಮಿಶ್ರಣ ಬಳಸಿ ಗುಂಡಿಗಳನ್ನು ಮುಚ್ಚುವ ಮೂಲಕ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷವನ್ನು ಖಂಡಿಸಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಜನರ ಪ್ರಾಣಕ್ಕೆ ಗ್ಯಾರಂಟಿ ಇಲ್ಲವಾಗಿದೆ, ದೇಶದಲ್ಲಿ “ಕಾಂಗ್ರೆಸ್ ಗಿಡಗಳು” ಪ್ರಕೃತಿಗೆ ಹೇಗೆ ಮಾರಕವಾಗಿವೆಯೋ, ಹಾಗೆಯೇ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗರಿಗೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Megha
the authorMegha

Leave a Reply

error: Content is protected !!