
ಬೆಂಂಗಳೂರು: ಹಕ್ಕಿ ಜ್ವರವು ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಕಂಡು ಬಂದಿದ್ದು, ಅಲ್ಲದೇ ಪಕ್ಕದ ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿಗಳು ಅನುಮಾಸ್ಪದವಾಗಿ ಸಾವನ್ನಪ್ಪಿವೆ. ಹೀಗಾಗಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ತಿಳಿಸಿದ್ದಾರೆ.
ಯಾವುದೇ ಪಕ್ಷಿಗಳು ಅಥವಾ ಕೋಳಿಗಳು ಅನುಮಾನಾಸ್ಪದವಾಗಿ ಅಸಹಜವಾಗಿ ಇಲ್ಲವೇ ಇದ್ದಕ್ಕಿದ್ದಂತೆ ಸಾತ್ತಿರುವುದು ಕಂಡುಬಂದಲ್ಲಿ ಹತ್ತಿರದ ಪಶು ಇಲಾಖೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಹಕ್ಕಿ ಜ್ವರ ಕಂಡು ಬಂದ ಸ್ಥಳದಿಂದ 10 ಕೀ.ಮಿ ಸುತ್ತಲಿನ ಗ್ರಾಮಗಳಲ್ಲಿ ಶೀತ ಅಥವಾ ಕೆಮ್ಮು ಮಾದರಿಯ ಪ್ರಕರಣಗಳು, ಜ್ವರ ಪ್ರಕರಣಗಳು, ತಲೆನೋವು, ಸ್ನಾಯುಗಳ ನೋವು, ಗಂಟಲು ನೋವು ಇತರೆ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಮಾಹಿತಿ ನೀಡಿ ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದ್ದಾರೆ.
ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಹಕ್ಕಿ ಜ್ವರದ (ಎಚ್5ಎನ್1) ಬಗ್ಗೆ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ನೀಡುತ್ತಿದ್ದು, ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಗುರುತಿಸಿ ಮಾಲೀಕರು ಮತ್ತು ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಲು ಕ್ರಮವಹಿಸಿದ್ದಾರೆ.
ಇನ್ನು ಸಾರ್ವಜನಿಕರು ಭಯ ಭೀತಿಗೊಳ್ಳದೆ ಎಚ್ಚರದಿಂದ ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ಚೆನ್ನಾಗಿ ತೊಳೆದುಕೊಳ್ಳುವುದು, ಜನ ನಿಬಿಡ ಸ್ಥಳಗಳಲ್ಲಿ ಹಾಗೂ ಇತರೆಡೆ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.