NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ 38 ತಿಂಗಳ ಹಿಂಬಾಕಿ, 2024ರ ವೇತನ ಪರಿಷ್ಕರಣೆ ಕುರಿತು ಸರ್ಕಾರ–ಕೆಲ ಸಂಘಟನೆಗಳ ದ್ವಿಮುಖ ನಡೆಗೆ BMS ಖಂಡನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು/ ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸೇರಿದಂತೆ ರಾಜ್ಯದ ಸಕಲ ಸಾರಿಗೆ ನೌಕರರಿಗೆ ಸಂಬಂಧಿಸಿದಂತೆ ಹಿಂಬಾಕಿ ವೇತನ ಹಾಗೂ ವೇತನ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನಿಲುವು ಗಂಭೀರ ಚಿಂತೆಗೆ ಕಾರಣವಾಗಿದೆ ಎಂದು ಭಾರತೀಯ ಮಜ್ದೂರ ಸಂಘದ – ಬೀದರ್ ವಿಭಾಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತದೆ.

ಸರ್ಕಾರವು ಇನ್ನೂ ಅಂತಿಮ ಆದೇಶ ಹೊರಡಿಸದೇ ಇರುವ ಹಂತದಲ್ಲೇ, 38 ತಿಂಗಳ ಹಿಂಬಾಕಿ ವೇತನ ಪಾವತಿಸಬೇಕಿರುವ ಸಂದರ್ಭದಲ್ಲಿ, ಕೇವಲ 14 ತಿಂಗಳ ಹಿಂಬಾಕಿ ಹಣವನ್ನು ನೀಡಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿರುವುದು ಸಾರಿಗೆ ನೌಕರರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ನೌಕರರ ಶ್ರಮದ ಹಣವನ್ನು ಕಡಿತಗೊಳಿಸುವ ಸ್ಪಷ್ಟ ಅನ್ಯಾಯವಾಗಿದ್ದು, ನೌಕರ ವರ್ಗದ ಮೇಲಿನ ನಂಬಿಕೆಗೆ ದೊಡ್ಡ ಧಕ್ಕೆ ಆಗಿದೆ ಎಂದು ಆಕ್ರೋಶ ಹೊರಹಾಕಿದೆ.

ಇನ್ನು ಇದಕ್ಕಿಂತಲೂ ಗಂಭೀರವಾದ ವಿಷಯವೆಂದರೆ, 01-01-2024 ರಿಂದ ಜಾರಿಯಾಗಬೇಕಿದ್ದ ವೇತನ ಪರಿಷ್ಕರಣೆಯನ್ನು 01-01-2026 ರಿಂದ ಜಾರಿಗೆ ತರುವ ಯತ್ನ ನಡೆಯುತ್ತಿರುವುದು. ಇದರಿಂದ ಸಾರಿಗೆ ನೌಕರರು ಹಾಗೂ ಅಧಿಕಾರಿಗಳು ಹಿಂದಿನ ಎರಡು ವರ್ಷಗಳು ಹಾಗೂ ಮುಂದಿನ ಎರಡು ವರ್ಷಗಳ ಆರ್ಥಿಕ ಲಾಭವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನೌಕರರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳುವ ಕಾರ್ಮಿಕ ವಿರೋಧಿ ಕ್ರಮವಾಗಿದೆ ಎಂದು ಕಿಡಿಕಾರಿದೆ.

ಇನ್ನೂ ಹೆಚ್ಚು ಆತಂಕಕಾರಿ ಅಂಶವೆಂದರೆ, ಸರ್ಕಾರದೊಂದಿಗೆ ಕೆಲ ಸಂಘಟನೆಗಳು ಒಳಒಪ್ಪಂದ ಮಾಡಿಕೊಂಡು ದ್ವಿಮುಖ ನಾಟಕವಾಡುತ್ತಿವೆ ಎಂಬ ಗಂಭೀರ ಆರೋಪಗಳು ನೌಕರ ವಲಯದಲ್ಲಿ ಕೇಳಿಬರುತ್ತಿವೆ. ಸಾರ್ವಜನಿಕವಾಗಿ ನೌಕರರ ಪರ ಮಾತನಾಡಿ, ಒಳಗಡೆ ಸರ್ಕಾರದ ಪರ ನಿಲ್ಲುವ ನಡೆ ಕಾರ್ಮಿಕ ದ್ರೋಹಕ್ಕೆ ಸಮಾನವಾಗಿದೆ.

ವಿಧಾನಸಭೆಯ ಬಾಂಕ್ವೇಟ್ ಹಾಲ್ ಸೇರಿದಂತೆ ವಿವಿಧ ಸಭೆಗಳಲ್ಲಿ ಸರ್ಕಾರದ ಪರ ನಿಂತು, ಹೊರಗೆ ಮಾತ್ರ ನೌಕರರ ಪರ ಎಂಬಂತೆ ಹೇಳಿಕೊಳ್ಳುವ ಸಂಘಟನೆಗಳ ನಿಲುವನ್ನು ಭಾರತೀಯ ಮಜ್ದೂರ ಸಂಘ ತೀವ್ರವಾಗಿ ಖಂಡಿಸುತ್ತದೆ.

ಭಾರತೀಯ ಮಜ್ದೂರ ಸಂಘ – ಸಾರಿಗೆ ನೌಕರರ ಸ್ಪಷ್ಟ ಹಾಗೂ ಅಚಲ ನಿಲುವು: 38 ತಿಂಗಳ ಸಂಪೂರ್ಣ ಹಿಂಬಾಕಿ ವೇತನವನ್ನು ತಕ್ಷಣ ಪಾವತಿಸಬೇಕು. ವೇತನ ಪರಿಷ್ಕರಣೆಯನ್ನು 01-01-2024 ರಿಂದಲೇ ಜಾರಿಗೊಳಿಸಬೇಕು. ನೌಕರರ ಅಭಿಪ್ರಾಯವಿಲ್ಲದೆ ಯಾವುದೇ ಏಕಪಕ್ಷೀಯ ನಿರ್ಣಯ ಅಸ್ವೀಕಾರ್ಯ. ಸರ್ಕಾರ–ಸಂಘಟನೆಗಳ ಯಾವುದೇ ಒಳಒಪ್ಪಂದವನ್ನು ನಾವು ಒಪ್ಪುವುದಿಲ್ಲ.

ಸರ್ಕಾರ ಹಾಗೂ ಕೆಲ ನೌಕರ ಸಂಘಟನೆಗಳಿಗೆ ಭಾರತೀಯ ಮಜ್ದೂರ ಸಂಘ ಸ್ಪಷ್ಟ ಎಚ್ಚರಿಕೆ ನೀಡುತ್ತದೆ — ಸಾರಿಗೆ ನೌಕರರ ಸಹನಶೀಲತೆಯನ್ನು ದುರ್ಬಲತೆ ಎಂದು ಭಾವಿಸಬಾರದು. ನ್ಯಾಯ ಒದಗಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ನಡೆಯುವ ಉಗ್ರ ಹೋರಾಟಗಳಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಕೆಲ ಸಂಘಟನೆಗಳೇ ಸಂಪೂರ್ಣ ಜವಾಬ್ದಾರರಾಗಲಿವೆ.

ಇದು ಕೇವಲ ವೇತನದ ಪ್ರಶ್ನೆಯಲ್ಲ: ಇದು ನೌಕರರ ಗೌರವ, ನಂಬಿಕೆ ಮತ್ತು ಬದುಕಿನ ಪ್ರಶ್ನೆ. ರಾಜ್ಯ ಸರ್ಕಾರ ಈ ಕೂಡಲೇ ನೌಕರಪರ ನಿರ್ಣಯ ಕೈಗೊಳ್ಳಬೇಕು ಎಂದು ಭಾರತೀಯ ಮಜ್ದೂರ ಸಂಘ ಆಗ್ರಹಿಸುತ್ತದೆ.

ಇದಲ್ಲದೆ, ಚಾಲನಾ ಸಿಬ್ಬಂದಿಗಳಿಗೆ ನಿಗಮದ ಕೆಲ ಅಧಿಕಾರಿವರ್ಗದಿಂದ ಹಾಗೂ ಸಾರ್ವಜನಿಕರಿಂದ ನಿರಂತರ ಕಿರುಕುಳ ನಡೆಯುತ್ತಿರುವುದು ಗಂಭೀರ ವಿಷಯವಾಗಿದೆ. ಚಿಲ್ಲರೆ ಹಣ, ನಿಲುಗಡೆ, ಟಿಕೆಟ್ ವಿಷಯ ಸೇರಿದಂತೆ ಸಣ್ಣ ಕಾರಣಗಳಿಗೆ ಚಾಲಕ–ನಿರ್ವಾಹಕರ ಮೇಲೆ ಮಾನಸಿಕ ಒತ್ತಡ, ಅವಾಚ್ಯ ಪದ ಬಳಕೆ ಮತ್ತು ಬೆದರಿಕೆ ನಡೆಯುತ್ತಿರುವುದು ಸಂಪೂರ್ಣ ಅಸ್ವೀಕಾರ್ಯ.

ಈ ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕು, ಚಾಲನಾ ಸಿಬ್ಬಂದಿಗೆ ರಕ್ಷಣಾತ್ಮಕ ವ್ಯವಸ್ಥೆ ಒದಗಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಮಜ್ದೂರ ಸಂಘ (BMS) ಒತ್ತಾಯಿಸಿದೆ.

Megha
the authorMegha

Leave a Reply

error: Content is protected !!