ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮೃತ ನೌಕರರ ಕುಟುಂಬಗಳ ಅಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿಗೆ ತೆದುಕೊಳ್ಳುತ್ತಿದ್ದು, ಎಲ್ಲರೂ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.
ಸೋಮವಾರ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ನಿರೀಕ್ಷಣೆಯಲ್ಲಿದ್ದ ಮೃತಾವಲಂಬಿತ ಅಭ್ಯರ್ಥಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ನಿರೀಕ್ಷಣೆಯಲ್ಲಿದ್ದ ಮೃತಾವಲಂಬಿತ ಅಭ್ಯರ್ಥಿಗಳಲ್ಲಿ ಸದ್ಯಕ್ಕೆ ಅರ್ಹತೆಯನುಸಾರ ಹಾಗೂ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ನೇಮಕಾತಿ ಆದೇಶ ಪತ್ರ ನೀಡಲಾಗಿದೆ. ಪ್ರಸ್ತುತ ಖಾಲಿ ಇರುವ ನಗಮದ ಪೇದೆ, ತಾಂತ್ರಿಕ ಸಹಾಯಕ ಮತ್ತು ಸಹಾಯಕ (ಕಚೇರಿ) ಒಟ್ಟು 48 ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಒಟ್ಟಾರೆ ಸಂಸ್ಥೆಗೆ ಅಕ್ಟೋಬರ್ 2023 ಮತ್ತು ಮಾರ್ಚ್ 2024 ರ ನಡುವೆ ನಿಗಮವು ಸುಮಾರು 250 ಅವಲಂಬಿತರನ್ನು ವರ್ಗ-3 (ಮೇಲ್ವಿಚಾರಣೆಯೇತರ) ಮತ್ತು ವರ್ಗ-4 ಹುದ್ದೆಗಳಿಗೆ ಹಿರಿತನ ಮತ್ತು ಲಭ್ಯವಿರುವ ಸ್ಥಾನಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ.
ಇನ್ನು ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ವಿಭಾಗದಲ್ಲಿ ಇದ್ದ ಖಾಲಿ ಹುದ್ದೆಗಳ ಹೊರತಾಗಿಯೂ, ಬಹುಪಾಲು ಅವಲಂಬಿತರು ಜೂನಿಯರ್ ಅಸಿಸ್ಟೆಂಟ್ ಕಂ. ಡಾಟಾ ಎಂಟ್ರಿ ಆಪರೇಟರ್‌ಗಳ ಹುದ್ದೆಗಳನ್ನು ಬಯಸುತ್ತಿದ್ದಾರೆ, ಇದನ್ನು ಬಿಟ್ಟು ಖಾಲಿ ಇರುವ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಅನುಕಂಪದ ನೇಮಕಾತಿಗಳ ಜೊತೆಗೆ, ನೌಕರರಿಗೆ ಕೆಲಸದ ಸುರಕ್ಷತೆ ಹೆಚ್ಚಿಸಲು ಸಂಸ್ಥೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನಿಗಮವು ಹೊಸದಾಗಿ 2,500 ಕಂಡಕ್ಟರ್‌ಗಳನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿದೆ. ನೌಕರರ ಗುಂಪು ವಿಮಾ ಪ್ರಯೋಜನೆಯನ್ನು ₹3 ಲಕ್ಷದಿಂದ ₹10 ಲಕ್ಷಕ್ಕೆ ಗಣನೀಯವಾಗಿ ಹೆಚ್ಚಿಸಲಾಗಿದೆ ಮತ್ತು ನೌಕರರು, ಅವರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸಲು ₹ 1 ಕೋಟಿ ವಿಮಾ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ವಿವರಿಸಿದರು.
ಇದಲ್ಲದೆ, 45 ವರ್ಷಕ್ಕಿಂತ ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳಿಗೆ ಹೃದಯ ತಪಾಸಣೆ ನಡೆಸಲು ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿದರು.
ಪ್ರಸ್ತುತ ಸಾಲಿನಲ್ಲಿ ಸಂಸ್ಥೆಗೆ ASRTU ಮತ್ತು SKOCH ನಂತಹ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪ್ರಶಸ್ತಿಗಳು ಲಭಿಸಿವೆ. ಸಂಸ್ಥೆಗೆ ಇತ್ತೀಚೆಗೆ ಜೂನ್-2024ರಲ್ಲಿ ಆರೋಗ್ಯ ವರ್ಲ್ಡ್ ಪ್ರತಿಷ್ಠಿತ ಸಂಸ್ಥೆಯಿಂದ ಹೆಲ್ತಿ ಅಂಡ್ ಸೆಫ್ಟಿ ವರ್ಕ್ಪಪ್ಲೇಸ್ ಸಿಲ್ವರ್ ಮಟ್ಟದ ಮಾನ್ಯತೆ ದೊರಕಿದೆ.
ಪ್ರಯಾಸ್ ಯೋಜನೆಯಿಂದಾಗಿ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಸಹಯೋಗದೊಂದಿಗೆ ದಾಖಲೆಗಳನ್ನು ಕ್ರೂಢೀಕರಿಸಿ ಮುಂಚಿತವಾಗಿ ಸಲ್ಲಿಸುವುದರಿಂದ ಪಿಂಚಣಿ ಪಾವತಿ ಆದೇಶದ ವಿಲೇವಾರಿ ನೌಕರರ 58ನೇ ವರ್ಷದ ಕೊನೆಯ ದಿನ ವಿತರಿಸಲಾಗುತ್ತಿದೆ. ಸಂಸ್ಥೆಯ ನೌಕರರಿಗೆ ಇಲ್ಲಿಯವರೆಗೆ 266ಕ್ಕೂ ಹೆಚ್ಚು ಪಿಂಚಣಿ ಪಾವತಿ ಆದೇಶ ವಿತರಿಸಲಾಗಿದೆ.
ಬೆಂಗಳೂರು ನಗರದ ಜನದಟ್ಟಣೆಯ ಸಾರಿಗೆ ವ್ಯವಸ್ಥೆಯಲ್ಲಿ ಸದಾ ಕರ್ತವ್ಯ ನಿರತ ಸಿಬ್ಬಂದಿಗಳ ಶ್ವಾಸಕೋಶ ಸಂಬಂಧಿತ, ಉಸಿರಾಟ ಕಾಯಿಲೆ, ಅಲರ್ಜಿಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್ ಮತ್ತು ಸುಧಾರಿತ ಪರೀಕ್ಷೆಗಳನ್ನು ಮಾಡಬೇಕೆಂಬ ಕಾಳಜಿಯೊಂದಿಗೆ ಜಯನಗರದ ವಾಯು ಚೆಸ್ಟ್ ಅಂಡ್ ಸ್ಲೀಪ್ ಸೆಂಟರ್‌ನಲ್ಲಿ ನಿಯಮಿತವಾಗಿ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಈವರೆವಿಗೂ ಸಂಸ್ಥೆಗೆ ಒಟ್ಟಾರೆ 138 ಪ್ರಶಸ್ತಿ/ಪುರಸ್ಕಾರಗಳು ಲಭಿಸಿವೆ ಎಂದು ಸಾರಿಗೆ ಸಚಿವರು ತಿಳಿಸಿದರರು.
ಈ ಸಂದರ್ಭದಲ್ಲಿ ನಿಗಮದ ಎಂಡಿ ಆರ್. ರಾಮಚಂದ್ರನ್, ಮಾಹಿತಿ ತಂತ್ರಜ್ಞಾನದ ನಿರ್ದೇಶಕಿ ಎಂ.ಶಿಲ್ಪ ಸೇರಿದಂತೆ ಎಲ್ಲ ಇಲಾಖಾ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.