ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್ ಡಿಕ್ಕಿ ಹೊಡೆದ ಪರಿಣಾಮ 65 ವರ್ಷದ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಮಡಿವಾಳ ಬಸ್ ನಿಲ್ದಾಣದ ಬಳಿ ಇಂದು ಬಳಗ್ಗೆ ನಡೆದಿದೆ.

ತರಕಾರಿ ವ್ಯಾಪಾರಿ ವೆಂಕಟರಾಮಪ್ಪ (65) ಮೃತರು. ಇವರು ಇಂದು ಬೆಳಗ್ಗೆ 6:30ರ ಸುಮಾರಿಗೆ ತರಕಾರಿ ತರಲು ಹೋಗಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ವೆಂಕಟರಾಮಪ್ಪ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಮಡಿವಾಳ ಮಾರ್ಕೆಟ್ ರೋಡ್ಗೆ ತರಕಾರಿ ತರಲು ಹೋಗಿ ಬಳಿಕ ತರಕಾರಿ ತೆಗೆದುಕೊಂಡು ಬಂದು ವಾಪಸ್ ಬಂದಿದ್ದ ವೆಂಕಟರಾಮಪ್ಪ ಬಸ್ ಹತ್ತಲು ಮಡಿವಾಳ ಬಸ್ ನಿಲ್ದಾಣದಲ್ಲಿ ನಿಂತಿದ್ದರು.
ಈ ವೇಳೆ ಎಸ್ಎಂಬಿಟಿ ರೈಲ್ವೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ನಡುವೆ ಕಾರ್ಯಾಚರಣೆಗೊಳ್ಳುತ್ತಿದ್ದ ಬಿಎಂಟಿಸಿ ಬಸ್ ಫುಟ್ಪಾತ್ನಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದಿದೆ. ಮೊದಲು ಟಾಟಾ ಎಸಿ ಗಾಡಿಗೆ ಡಿಕ್ಕಿಯಾಗಿ ಬಳಿಕ ವೆಂಕಟರಾಮಪ್ಪಗೆ ಬಸ್ ಗುದ್ದಿದೆ. ಪರಿಣಾಮ ಅವರು ಅಸುನೀಗಿದ್ದಾರೆ.
ಸದ್ಯ ವೆಂಕಟರಾಮಪ್ಪ ಅವರ ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.
Related










