
ಆನೇಕಲ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೇಕರಿಗೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಜಿಗಿಣಿಯಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಬನ್ನೇರುಘಟ್ಟದಿಂದ ಜಿಗಣಿ ಕಡೆಗೆ ಬಿಎಂಟಿಸಿ ಬಸ್ ಬರುತ್ತಿತ್ತು ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯಲ್ಲಿದ್ದ ಬೇಕರಿಗೆ ಡಿಕ್ಕಿ ಹೊಡೆದಿದೆ.
ಇನ್ನು ಬೆಳಗಿನ ಜಾವ ಆಗಿದ್ದರಿಂದ ಗ್ರಾಹಕರು ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ, ಬೇಕರಿ ಇನ್ನೂ ತೆರೆಯದ ಕಾರಣ, ಗ್ರಾಹಕರು ಇರಲಿಲ್ಲ. ಹೀಗಾಗಿ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕ ನಿದ್ದೆಗಣ್ಣಿನಲ್ಲಿದ್ದರಿಂದ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಅಪಘಾತದಿಂದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಅವಘಡ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.