BMTC: ಎಲ್ಲ ಚಾಲನಾ ಸಿಬ್ಬಂದಿಗಳಿಗೂ ಸಾಮಾನ್ಯ ಪಾಳಿ ಡ್ಯೂಟಿಕೊಡಿ- ಅಧ್ಯಕ್ಷರಿಗೆ ಕಂಡಕ್ಟರ್ ಅನಿಲ್ ಕುಮಾರ್ ಮನವಿ

ಬೆಂಗಳೂರು: ಬಿಎಂಟಿಸಿ ಸಾಮಾನ್ಯ ಪಾಳಿ ಅನೂಸೂಚಿಗಳಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರಿಗೆ ಡ್ಯೂಟಿ ರೋಟಾ ಪದ್ಧತಿಯಲ್ಲಿ 24,000 ರೂ. ಹಾಗೂ ಚಾಲಕರು ಮತ್ತು ಚಾಲಕ ಕಂ ನಿರ್ವಾಹಕರಿಗೆ 27,000 ರೂ.ಗಳಿಗಿಂತ ಅಧಿಕ ಮೂಲವೇತನ ಹೊಂದಿರುವ ಚಾಲನಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡದಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆದು ಹೊಸದಾಗಿ ಡಿಸೆಂಬರ್ ತಿಂಗಳಲ್ಲಿ 2026ರ ಡ್ಯೂಟಿ ರೋಟಾ ಪದ್ಧತಿಯನ್ನು ಮಾಡಬೇಕೆಂದು ಎಸ್. ಅನಿಲ್‌ಕುಮಾರ್ ಮತ್ತಿತರರು ಮನವಿ ಮಾಡಿದ್ದಾರೆ.

ಇಂದು ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ ಅವರನ್ನು ಭೇಟಿ ಮಾಡಿದ ಅವರು, ಈ ಸಾಮಾನ್ಯ ಪಾಳಿ ನೀಡಬಾರದೆಂಬ ಆದೇಶವನ್ನು ಹಿಂಪಡೆದು ಎಲ್ಲ ಚಾಲನಾ ಸಿಬ್ಬಂದಿಗಳಿಗೆ ಸಾಮಾನ್ಯ ಪಾಳಿಯನ್ನು ನೀಡಬೇಕು ಮತ್ತು ಡಿಸೆಂಬರ್ ತಿಂಗಳಲ್ಲಿ ಡ್ಯೂಟಿ ರೋಟಾ ಕೌನ್ಸೆಲಿಂಗ್ ಮಾಡಬೇಕೆಂದು ಮನವಿ ಮಾಡಿದರು.
ಈ ಸಂಬಂಧ ಚಾಲಕ ಮತ್ತು ನಿರ್ವಾಹಕರು ಮಳೆ ಗಾಳಿ ಎನ್ನದೇ ಹಗಲಿರುಳು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಶಕ್ತಿ ಯೋಜನೆಯೂ ಯಶಸ್ವಿಯಾಗಲು ಶ್ರಮಿಸುತ್ತಿದ್ದಾರೆ. ನೌಕರರು ಸಾಮಾನ್ಯ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿ ಅದರಲ್ಲಿ ಬರುವ ಹೆಚ್ಚುವರಿ ಹಣದಿಂದ (ಒಟಿ) ಜೀವನ ನಡೆಸುತ್ತಿದ್ದಾರೆ.
ಕೆಲವು ನೌಕರರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ನಲ್ಲಿ ಅಥವಾ ಕೈಸಾಲ ಮಾಡಿಕೊಂಡಿದ್ದಾರೆ. 181 ಕೆಲವು ನೌಕರರು ಸಾಲ ಮಾಡಿ ಮಕ್ಕಳ ಮದುವೆ ಮಾಡಿರುತ್ತಾರೆ. ಸಾಮಾನ್ಯ ಪಾಳಿಯಲ್ಲಿ ಕರ್ತವ್ಯ ಮಾಡಿ ಬರುವ ಹೆಚ್ಚುವರಿ ಹಣದಿಂದ (ಒಟಿ) ಪ್ರತಿ ತಿಂಗಳು ಇಎಂಐ ರೂಪದಲ್ಲಿ ಸಾಲಗಳನ್ನು ತೀರಿಸುತ್ತಿರುತ್ತಾರೆ.
ನೌಕರರು ಸಾಮಾನ್ಯ ಪಾಳಿಯನ್ನು ನಂಬಿಕೊಂಡು ಪ್ರತಿ ತಿಂಗಳು ಕಮಿಟ್‌ಮೆಂಟ್ ಆಗಿರುತ್ತಾರೆ. ಕೆಲವು ನೌಕರರು ಆರೋಗ್ಯ ಸಮಸ್ಯೆ ಇದ್ದರೂ ಕೂಡ ಸಾಮಾನ್ಯ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ವೇತನ ಹೆಚ್ಚಳ ಆಗದೇ ನೌಕರರು ಕಂಗಾಲಾಗಿದ್ದಾರೆ.
ಬೆಂಗಳೂರಿನಲ್ಲಿ ದಿನನಿತ್ಯದ ಸಾಮಗ್ರಿ ಮತ್ತು ವಸ್ತುಗಳ ಬೆಲೆ ಗಗನಕ್ಕೇರಿದೆ. ಸಾಮಾನ್ಯ ಪಾಳಿಯನ್ನು ಹೊಸದಾಗಿ ನೇಮಕಗೊಂಡಿರುವ ಚಾಲಕ ನಿರ್ವಾಹಕರು ಆಯ್ಕೆಮಾಡಿಕೊಳ್ಳದೇ ಪ್ರತಿ ದಿನ ಕೆಲವು ಘಟಕಗಳಲ್ಲಿ ಚಾಲಕ ನಿರ್ವಾಹಕರ ಕೊರತೆಯಿಂದ ಸಾಮಾನ್ಯ ಪಾಳಿಯ ಮಾರ್ಗಗಳು ನಿಲ್ಲುತ್ತಿದೆ. ಇದರಿಂದ ಸಂಸ್ಥೆಗೆ ನಷ್ಟವುಂಟಾಗುತ್ತಿದೆ.
ಆದ್ದರಿಂದ ನೌಕರರ ಪರವಾಗಿ ಇರುವ ತಾವುಗಳು ಇದನ್ನು ಮನಗೊಂಡು ಈ ಸಾಮಾನ್ಯ ಪಾಳಿ ಅನುಸೂಚಿಗಳಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಬಾರದು ಎಂಬ ಆದೇಶವನ್ನು ಹಿಂಪಡೆದು ಹಿಂದಿನ 2024ರಲ್ಲಿ ನಡೆಸಿದ ಡ್ಯೂಟಿ ರೋಟಾ ಪದ್ದತಿಯನ್ನು 2026 ರಲ್ಲಿ ಮುಂದುವರಿಸಬೇಕು ಹಾಗೂ ಎಲ್ಲ ವರ್ಗದ ಚಾಲನಾ ಸಿಬ್ಬಂದಿಗಳಿಗೆ ಸಾಮಾನ್ಯ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಸಮಸ್ತ ಚಾಲನಾ ಸಿಬ್ಬಂದಿಗಳ ಪರವಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಬಿಎಂಟಿಸಿ ಘಟಕ 21ರ ಕಂಡಕ್ಟರ್ ಅನಿಲ್‌ಕುಮಾರ್ ತಿಳಿಸಿದ್ದಾರೆ.
Related









