CRIMENEWSನಮ್ಮರಾಜ್ಯಬೆಂಗಳೂರು

BMTC ಘಟಕ-23ರ ನೌಕರರಿಗೆ ರಜೆ ಕೊಡಲು ತಲಾ 4900 ರೂ. ಡಿಎಂ ಲಂಚ ಪಡೆದ ಆರೋಪ: ದಿಢೀರ್‌ ಭೇಟಿ ನೀಡಿದ S&V ನಿರ್ದೇಶಕರಾದ ರಮ್ಯಾ ಮತ್ತು ತಂಡ

ಬಿಎಂಟಿಸಿ ಘಟಕ-23ರ ಪ್ರಭಾರಿ ಡಿಎಂ ಶಿವಗಾಮಿ.
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಭ್ರಷ್ಟ ಅಧಿಕಾರಿಗಳಿಗೆ ಭದ್ರತಾ ಮತ್ತು ಜಾಗೃತ ಅಧಿಕಾರಿಗಳು ಸಿಂಹಸ್ವಪ್ನವಾಗಿದ್ದಾರೆ. ನೌಕರರಿಗೆ ಅವರ ಹಕ್ಕಿನ ರಜೆ ಪಡೆಯುವುದಕ್ಕೂ ಲಂಚ ಪಡೆಯುವ ನಿಗಮದ ಅಧಿಕಾರಿಗಳ ಹೆಡೆಮುರಿಕಟ್ಟುವುದಕ್ಕೆ ಸಜ್ಜಾಗಿದ್ದಾರೆ.

ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಲ್ಯಾಣನಗರದಲ್ಲಿರುವ – ಘಟಕ 23ರ ಮೇಲೆ ಭದ್ರತಾ ಮತ್ತು ಜಾಗೃತ ವಿಭಾಗದ ನಿರ್ದೇಶಕರಾದ ಸಿ.ಕೆ. ರಮ್ಯಾ ಅವರ ನೇತೃತ್ವದ ತಂಡ ದಿಢೀರ್‌ ದಾಳಿ ನಡೆಸಿ ನೌಕರರಿಗೆ ರಜೆ ಮಂಜೂರು ಮಾಡುವುದಕ್ಕೆ ಪ್ರತಿ ನೌಕರರಿಂದಲೂ ತಲಾ ಸುಮಾರು 4900 ರೂಪಾಯಿ ಲಂಚ ಪಡೆದಿರುವ ಪ್ರಭಾರಿ ಘಟಕ ವ್ಯವಸ್ಥಾಪಕಿ ಶಿವಗಾಮಿ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬುಧವಾರ ಬೆಳಗ್ಗೆ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್‌ ಅವರ ಮಾರ್ಗದರ್ಶನದಲ್ಲಿ ಘಟಕಕ್ಕೆ ದಿಢೀರ್‌ ಭೇಟಿ ನೀಡಿದ ಭದ್ರತಾ ಮತ್ತು ಜಾಗೃತ ನಿರ್ದೇಶಕರು ಮತ್ತ ಅವರ ತಂಡ ಪ್ರಭಾರಿ ಘಟಕ ವ್ಯವಸ್ಥಾಪಕಿ ಶಿವಗಾಮಿ ಅವರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ.

ಮೊನ್ನೆಯಷ್ಟೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮಟ್ಟ ಹಾಕುವುಕ್ಕೆ ನೌಕರರ ಸಹಕಾರ ಬೇಕು. ನಿಮ್ಮ ಗುರುತನ್ನು ಗೌಪ್ಯವಾಗಿಟ್ಟು ಭ್ರಷ್ಟರ ಹೆಡೆಮುರಿ ಕಟ್ಟುತ್ತೇವೆ ಎಂಬ ಮಹತ್ವದ ಸಂದೇಶವನ್ನು ನೌಕರರಿಗೆ ನೀಡಿದ್ದರು.

ಅದರಂತೆ ಇಂದು ನೌಕರರಿಗೆ ರಜೆ ಕೊಡುವುದಕ್ಕೂ 4900 ರೂ. ಲಂಚ ಪಡೆದಿದ್ದಾರೆ ಎಂಬ ದೂರುಗಳು ಕೇಂದ್ರ ಕಚೇರಿಗೆ ಬಂದ ಹಿನ್ನೆಲೆಯಲ್ಲಿ ನಡೆಸಿದ ಶಿಸ್ತು ಕಾರ್ಯಾಚರಣೆಯಲ್ಲಿ ಸಂಸ್ಥೆಯ ಕಲ್ಯಾಣನಗರ ಘಟಕದ-23ರ ಪ್ರಭಾರಿ ಘಟಕ ವ್ಯವಸ್ಥಾಪಕಿ ಶಿವಗಾಮಿ ಅವರ ಭ್ರಷ್ಟಾಚಾರ ಕೃತ್ಯ ಕಲೆ ಹಾಕುವಲ್ಲಿ ಅಧಿಕಾರಿ ರಮ್ಯಾ ಅವರ ನೇತೃತ್ವದ ತಂಡ ಯಶಸ್ವಿಯಾಗಿದೆ.

ಪ್ರಭಾರಿ ಘಟಕ ವ್ಯವಸ್ಥಾಪಕಿಯಿಂದ ಶೋಷಣೆಗೆ ಒಳಗಾದ ಸಂತ್ರಸ್ತ ಘಟಕದ ನೌಕರರು ಭದ್ರತಾ ಮತ್ತು ಜಾಗೃತ ಅಧಿಕಾರಿಗಳ ಕಾರ್ಯ ವೈಖರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪ್ರಭಾರಿ ಘಟಕ ವ್ಯವಸ್ಥಾಪಕಿ ಶಿವಗಾಮಿ ಅವರು ಕಳೆದ 24 ವರ್ಷಗಳಿಂದ ಕೇವಲ ಘಟಕ 10 ಮತ್ತು ಘಟಕ 23ರಲ್ಲಿ ಮಾತ್ರ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಪ್ರಭಾವ ಮತ್ತು ಹುದ್ದೆಯ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡು, ಘಟಕದ ನೌಕರರಿಂದ ರಜೆ ಮಂಜೂರು ಮಾಡುವುದಕ್ಕೆ ಪ್ರತಿ ನೌಕರರಿಂದ ಸುಮಾರು 4900 ರೂ.ಲಂಚದ ರೂಪದಲ್ಲಿ ಹಣ ಪಡೆದಿದ್ದಾರೆ ಎಂಬ ಗಂಭೀರ ದೂರುಗಳು ಕೇಂದ್ರ ಭದ್ರತಾ ಇಲಾಖೆಗೆ ಬಂದಿದ್ದವು.

ಈ ಕುರಿತು ಖಚಿತ ಮಾಹಿತಿಯ ಮೇರೆಗೆ, ಕೇಂದ್ರ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿಗಳು ಇಂದು ಏಕಾಏಕಿ ದಾಳಿ ನಡೆಸಿ, ನೇರವಾಗಿ ಭ್ರಷ್ಟಾಚಾರದ ಕೃತ್ಯವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆಯ ನಂತರ ಘಟಕದ ನೌಕರರು ಹಾಗೂ ಸಿಬ್ಬಂದಿ ವರ್ಗವು ಹರ್ಷೋದ್ಗಾರ ವ್ಯಕ್ತಪಡಿಸಿ, “ಭ್ರಷ್ಟಾಚಾರ ಮುಕ್ತ ಬಿಎಂಟಿಸಿಯ ಕನಸಿಗೆ ಇದು ಒಂದು ದೊಡ್ಡ ಹೆಜ್ಜೆ” ಎಂದು ಅಧಿಕಾರಿಗಳೀಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್‌ ಅವರ ಮಾರ್ಗದರ್ಶನದಲ್ಲಿ ನಿರ್ದೇಶಕರಾದ ಸಿ.ಕೆ.ರಮ್ಯಾ ಅವರ ನೇತೃತ್ವದ ತಂಡದ ಈ ಶಿಸ್ತು ಕ್ರಮದಿಂದ, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಹೊಸ ದಿಕ್ಕು ದೊರೆಕಿದ್ದು, ತಂಡದ ಕಾರ್ಯವೈಖರಿ, ಪ್ರಾಮಾಣಿಕತೆ, ನಿಷ್ಠೆ ಮತ್ತು ಪಾರದರ್ಶಕ ಆಡಳಿತಕ್ಕೆ ಬಿಎಂಟಿಸಿ ನೌಕರರು ಹೊಸ ಭರವಸೆ, ನಂಬಿಕೆ ಹಾಗೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Megha
the authorMegha

Leave a Reply

error: Content is protected !!