CRIMENEWSಬೆಂಗಳೂರು

BMTC: ನಿರ್ವಾಹಕರ ಸೀಟ್‌ನಲ್ಲಿ ಕುಳಿತು ಕೊಳ್ಳಬೇಡಿ ಎಂದ ಚಾಲಕನ ಮೇಲೆ ಕಿಡಿಗೇಡಿ ಹಲ್ಲೆ- FIR ದಾಖಲು, ಬಂಧನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಡ್ಯೂಟಿ ಮೇಲಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕರೊಬ್ಬರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಸಂಜೆ ಉಡುಪಿ ಗಾರ್ಡನ್‌ ಸಮೀಪ ಬಿಎಂಟಿಸಿ ಬನಶಂಕರಿ ಘಟಕ-20ರ ಬಸ್‌ ಚಾಲಕ ಬಿ.ಶಿವರಾಜು(38) ಎಂಬುವರ ಮೇಲೆ ಪ್ರಯಾಣಿಕ ನಾಗರಾಜು ಎಂಬಾತನೆ ಹಲ್ಲೆ ಮಾಡಿದ ಆರೋಪಿ.

ಆರೋಪಿ ನಾಗರಾಜು ಏಕಾಏಕಿ ಬಸ್‌ ಚಲಾಯಿಸುತ್ತಿದ್ದ ಚಾಲಕ ಶಿವರಾಜು ಹಣೆಗೆ ಹೊಡೆದಿದ್ದು ಬಳಿಕ ತುಟಿಯ ಮೇಲೆ ಹೊಡೆದಿದ್ದರಿಂದ ಮುಂದಿನ ಎರಡು ಹಲ್ಲುಗಳು ಮುರಿದು ರಕ್ತಗಾಯವಾಗಿದೆ. ಸದ್ಯ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ಅಂದರೆ ಆ.24ರಂದು ಪೊಲೀಸ್‌ ಠಾಣೆಗೆ ಸಂಸ್ಥೆಯ ಅಧಿಕಾರಿಗಳು ಕರೆದುಕೊಂಡು ಬಂದು ದೂರು ನೀಡಿದ್ದಾರೆ.

ಘಟನೆ ವಿವರ: ಬಿಎಂಟಿಸಿ ನಿಗಮದ ಬನಶಂಕರಿ ಘಟಕದಲ್ಲಿ ಚಾಲಕ ಶಿವರಾಜು ಕರ್ತವ್ಯ ನಿರ್ವಹಿಸುತ್ತಿದ್ದು, ಶನಿವಾರ ಸಂಜೆ 4.30ರ ಸಮಯದಲ್ಲಿ ಬಸ್ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಬಿಟಿಎಂ ನಡುವೆ ಮಾರ್ಗಾಚರಣೆ ಮಾಡುತ್ತಿದ್ದ ವೇಳೆ ಉಡುಪಿ ಗಾರ್ಡನ್‌ ಸಿಗ್ನಲ್‌ ಬಳಿ ಪ್ರಯಾಣಿಕ ನಾಗರಾಜು ನಿರ್ವಾಹಕರ ಸೀಟ್‌ನಲ್ಲಿ ಕುಳಿತುಕೊಂಡಿದ್ದಾನೆ. ಆ ವೇಳೆ ಇದು ನಿರ್ವಾಹಕರ ಸೀಟು ನೀವು ಕುಳಿತುಕೊಳ್ಳಬೇಡಿ ಹಿಂದೆ ಹೋಗಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಈ ವೇಳೆ ಚಾಲಕ ಶಿವರಾಜು ಅವರ ಮನವಿಗೆ ಸ್ಪಂದಿಸುವ ಬದಲಿಗೆ ಅವಾಚ್ಯವಾಗಿ ನಿಂದಿಸಿದ್ದು, ಅಲ್ಲದೆ ಮುಂದೆ ಇಳಿದುಹೋಗುತ್ತೇವೆ ಸುಮ್ಮನಿರು ಎಂದು ದಮ್ಕಿಹಾಕಿದ್ದಾನೆ ಆರೋಪಿ. ಆದರೂ ತಾಳ್ಮೆ ಕಳೆದುಕೊಳ್ಳದ ಚಾಲಕ ನೀವು ಹೀಗೆ ಕುಳಿತುಕೊಂಡಿದ್ದರೆ ನಮ್ಮ ಲೈನ್‌ ಚೆಕಿಂಗ್‌ ಅಧಿಕಾರಿಗಳು ಬಂದರೆ ನಮಗೆ ದಂಡಹಾಕುತ್ತಾರೆ ನಾವು ಹೇಳುತ್ತಿರುವುದಕ್ಕೆ ಸ್ಪಂದಿಸಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಅಷ್ಟಕ್ಕೆ ಕುಪಿಗೊಂಡ ಆರೋಪಿ ನಾಗರಾಜು ಅವಾಚ್ಯ ಶಬ್ದಗಳಿಂದ ಬೈದು, ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಹಣೆಯಲ್ಲಿ ರಕ್ತಬಂದಿದೆ, ಅಷ್ಟಕ್ಕೂ ಬಿಡದೆ ಚಾಲಕನ ಮೇಲೆ ಮತ್ತೆ ಹಲ್ಲೆ ಮಾಡಿದ್ದರಿಂದ ಹಲ್ಲುಗಳು ಮುರಿದಿವೆ. ಈ ವೇಳೆ ಟಿಕೆಟ್‌ ವಿತರಿಸುತ್ತಿದ್ದ ನಿರ್ವಾಹಕ ಆಕಾಶ್‌ ಮತ್ತು ಪ್ರಯಾಣಿಕರು ತಡೆದಿದ್ದಾರೆ.

ಅಷ್ಟರಲ್ಲಿ ಹಣೆ ಮತ್ತು ತುಟಿಯ ಮೇಲೆ ಹಲ್ಲೆ ಮಾಡಿದ್ದರಿಂದ ರಕ್ತಸ್ರಾವವಾಗಿದ್ದು, ಕೂಡಲೇ ಚಾಲಕ ಶಿವರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆ.24ರಂದು ಪೊಲೀಸ್‌ ಠಾಣೆಗೆ ಸಂಸ್ಥೆಯ ಅಧಿಕಾರಿಗಳ ಜತೆ ಬಂದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹೊಡೆದು ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿರುವ ನಾಗರಾಜನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಚಾಲಕ ಶಿವರಾಜು ದೂರು ನೀಡಿದ್ದಾರೆ.

ಚಾಲಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!