ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಬ್ಬಾಳ ಸಮೀಪ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಸಿಟಿ) ಬಸ್ ಚಾಲಕ ನಿಯಂತ್ರಣ ತಪ್ಪಿ ಸೋಮವಾರ ಬೆಳಗ್ಗೆ ನಡೆದ ಸರಣಿ ಅಪಘಾತದಲ್ಲಿ 3 ಬೈಕ್, 2 ಕಾರುಗಳು ಜಖಂಗೊಂಡಿದ್ದು, ಇಬ್ಬರಿಗೆ ಗಾಯವಾಗಿದೆ. ಅವರಲ್ಲಿ, ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಅಪಘಾತದ ವಿಡಿಯೋ ವೈರಲ್ ಆಗಿದ್ದು, ಬ್ರೇಕ್ ಹಿಡಿಯುತ್ತಿಲ್ಲ ಎಂದು ಬಸ್ ಡ್ರೈವರ್ ಕೂಗಿದ್ದಾರೆ.
ಸೋಮವಾರ ಬೆಳಗ್ಗೆ 9.25ರ ಸುಮಾರಿಗೆ ಹೆಬ್ಬಾಳ ಫ್ಲೈ ಓವರ್ ಮೇಲೆ ಬಿಎಂಟಿಸಿ ವೋಲ್ವೋ ಬಸ್ ಬ್ರೇಕ್ ಕೈಕೊಟ್ಟು ಅಪಘಾತವಾಗಿತ್ತು. ಸದ್ಯ ಬಸ್ ಒಳಗಿನ ಸಿಸಿ ಕ್ಯಾಮರಾದಲ್ಲಿ ರೇಕಾರ್ಡ್ ಆದ ದೃಶ್ಯಗಳು ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಸ್ ಹೆಬ್ಬಾಳ ಫ್ಲೈ ಓವರ್ ಮೇಲೆ ಸಾಗುತ್ತಿದ್ದಾಗ ಬೈಕ್ ಸವಾರನೊಬ್ಬ ಬಸ್‌ನ ಬಲ ಭಾಗದಿಂದ ಬಂದು ಟ್ರಾಫಿಕ್ ಇತ್ತು ಎಂಬ ಕಾರಣಕ್ಕೆ ಎಡಭಾಗಕ್ಕೆ ತೆರಳುತ್ತಿದ್ದನು. ಈ ವೇಳೆ ಬಸ್ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆ ಬೈಕ್ ಸವಾರ ಮುಂದಿನ 2 ಬೈಕ್‌ಗಳಿಗೆ ಗುದ್ದಿ ಬಸ್‌ನ ಕೆಳಭಾಗದಲ್ಲಿ ಸಿಕ್ಕಿಕೊಂಡಿದ್ದಾನೆ. ಅದೃಷ್ಟವಾಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೈಕೊಟ್ಟ ಬ್ರೇಕ್: ಬೈಕ್‌ಗೆ ಡಿಕ್ಕಿ ಹೊಡೆದ ಕೂಡಲೇ ಬಸ್ ಚಾಲಕ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಆದರೆ, ಬ್ರೇಕ್ ಕೈಕೊಟ್ಟಿದ್ದು, ಬಸ್ ನಿಲ್ಲದೆ ಮುಂದಕ್ಕೆ ಸಾಗಿದೆ. ಮೂರು ಬೈಕ್, ಎರಡು ಕಾರುಗಳಿಗೂ ಡಿಕ್ಕಿಹೊಡೆದ ಬಳಿಕ ನಿಂತಿದೆ. ಅಷ್ಟರಲ್ಲಿ ಹಲವರಿಗೆ ಹಾನಿಯಾಗಿದೆ.
ನನ್ನ ಕಾಲು ಎಂದು ಕಿರುಚಿಕೊಂಡ ಬೈಕ್ ಸವಾರ: ಬಸ್ ಡಿಕ್ಕಿಯಾಗಿದ್ದರಿಂದ ವಾಹನ ಸವಾರರು ಚಿರಾಡಿದ್ದಾರೆ. ಬಸ್ ಕೆಳಗೆ ಸಿಕ್ಕಿಕೊಂಡ ಬೈಕ್ ಸವಾರ ನನ್ನ ಕಾಲು ಎಂದು ಕಿರುಚಾಡಿದ್ದಾರೆ. ಬಸ್ ನಿಲ್ಲದೆ ಮತ್ತಷ್ಟು ದೂರಕ್ಕೆ ಸಾಗಿದ್ದರೆ ಹತ್ತಾರು ವಾಹನ ಸವಾರರ ಪ್ರಾಣ ಹೋಗುತ್ತಿತ್ತು.
ಇಬ್ಬರಿಗೆ ಗಾಯ: ಈ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರಿಗೆ ಗಾಯವಾಗಿದ್ದು, ಬಸ್‌ನ ಕೆಳಗೆ ಸಿಕ್ಕಿಕೊಂಡು ಗಂಭೀರ ಗಾಯವಾದವರು ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಬಿಎಂಟಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಿಎಂಟಿಸಿ ಬಸ್ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಎಂಟಿಸಿ ನಡೆಯನ್ನು ಕೆಲವರು ಖಂಡಿಸಿದ್ದಾರೆ. ಕೆಲವರು ಬೈಕ್ ಸವಾರರು ಓವರ್‌ಟೆಕ್ ಮಾಡುವುದನ್ನು ಅಲ್ಲಗೆಳಿದಿದ್ದಾರೆ. ಇನ್ನು ಹಲವರು ಬೆಂಗಳೂರು ಟ್ರಾಫಿಕ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.