CRIMENEWSನಮ್ಮಜಿಲ್ಲೆಬೆಂಗಳೂರು

BMTC ಚಾಲಕನ ನಿರ್ಲಕ್ಷ್ಯ: ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಎಲೆಕ್ಟ್ರಿಕ್ ಬಸ್- ಗಾಜು ಪುಡಿಪುಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬಸ್‌ಗಳ ವಿಂಡೋ ಗ್ಲಾಸ್‌ಗಳು ಪುಡಿಪುಡಿಯಾದ ಘ ಟನೆ ನಗರದ ಹೃದಯ ಭಾಗದಲ್ಲಿರುವ ಕೆಆರ್ ಸರ್ಕಲ್ ಬಳಿ ನಡೆದಿದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದ ಪರಿಣಾಮ ಕೆಆರ್ ಸರ್ಕಲ್‌ನಿಂದ ನೃಪತುಂಗ ರಸ್ತೆ ಕಡೆಗೆ ದಟ್ಟಣೆಯ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಮೆಜೆಸ್ಟಿಕ್‌ನಿಂದ ಕಾಡುಗೋಡಿ ಕಡೆಗೆ ಹೊರಟಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಕೆಆರ್ ಸರ್ಕಲ್ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದ ಸಮೀಪಕ್ಕೆ ಬಂದಾಗ ಅಚಾನಕ್ ಮುಖ್ಯ ರಸ್ತೆಗೆ ಪ್ರವೇಶಿಸಿದೆ. ಈ ವೇಳೆ ಖಾಸಗಿ ಬಸ್ ಬರುತ್ತಿದ್ದುದರಿಂದ ತಪ್ಪಿಸಲಾಗದೆ ಡಿಕ್ಕಿ ಹೊಡೆದಿದೆ.

ಬಿಎಂಟಿಸಿ ಬಸ್​​ ಖಾಸಗಿ ಬಸ್​​ಗೆ ಡಿಕ್ಕಿಹೊಡೆದಿದ್ದರಿಂದ ಎರಡೂ ಬಸ್‌ಗಳ ಕಿಟಕಿ ಗಾಜುಗಳು ಒಡೆದು ಛಿದ್ರಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಹಾಗೂ ಅನಾಹುತ ಸಂಭವಿಸಿಲ್ಲ. ಈ ಅಪಘಾತದಿಂದ ಕೆಆರ್ ಸರ್ಕಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬಿಎಂಟಿಸಿ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಚಾಲಕನ ನಿರ್ಲಕ್ಷ್ಯಕ್ಕೆ ಇದು ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಗೆ ಬರುವಾಗ ಸಿಗ್ನಲ್ ಅಥವಾ ಬರುತ್ತಿರುವ ವಾಹನಗಳನ್ನು ಸರಿಯಾಗಿ ಗಮನಿಸದೇ ಈ ಅಪಘಾತ ನಡೆದಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಕೆ.ಆರ್. ಸರ್ಕಲ್ ಬೆಂಗಳೂರಿನ ಅತ್ಯಂತ ದಟ್ಟಣೆಯ ಪ್ರದೇಶಗಳಲ್ಲಿ ಒಂದು. ವಿಧಾನಸೌಧ, ಹೈಕೋರ್ಟ್, ರೈಲ್ವೇ ನಿಲ್ದಾಣ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹತ್ತಿರವಿರುವ ಈ ಭಾಗದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಂತಹ ಪ್ರದೇಶದಲ್ಲಿ ಬಸ್ ಚಾಲಕರು ಹೆಚ್ಚು ಜಾಗೃತರಾಗಿರಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ. ಅಲ್ಲದೆ ಟ್ರಾಫಿಕ್ ಪೊಲೀಸರು ಸಹ ಈ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಾರಿಗೆ  ಸುರಕ್ಷತೆ ಪ್ರಶ್ನೆ!: ಈ ಘಟನೆಯಿಂದಾಗಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಚಾಲಕರಿಗೆ ನಿಯಮಿತ ತರಬೇತಿ, ವಾಹನಗಳ ನಿರ್ವಹಣೆ ಮತ್ತು ಟ್ರಾಫಿಕ್ ನಿಯಮಗಳ ಕಟ್ಟುನಿಟ್ಟಾದ ಅನುಷ್ಠಾನ ಅಗತ್ಯವಿದೆ. ಇನ್ನು ಘಟನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Megha
the authorMegha

Leave a Reply

error: Content is protected !!