BMTC: ಇಂದು ಕಾಯಂ ನೌಕರರಿಗೆ 15000 ರೂ. ತರಬೇತಿ ನೌಕರರಿಗೆ 5000 ರೂ. ಮುಂಗಡ ವೇತನ ಪಾವತಿಸಲು ಎಂಡಿ ಆದೇಶ


- ವಿಜಯಪಥಕ್ಕೆ ಅಭಿನಂದನೆ ತಿಳಿಸಿದ ನೌಕರರು ಹಾಗೂ ಕೂಟದ ಪದಾಧಿಕಾರಿಗಳು
ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಅಕ್ಟೋಬರ್ ಮೊದಲ ವಾರದಲ್ಲಿ ದಸರಾ ಹಬ್ಬ ಇರುವುದರಿಂದ ಸಂಸ್ಥೆಯ ನೌಕರರ ಹಿತದೃಷ್ಟಿಯಿಂದ ದಸರಾ ಹಬ್ಬಕ್ಕೆ ಮುಂಚಿತವಾಗಿ ವೇತನ ಮುಂಗಡವಾಗಿ ಕಾಯಂ ನೌಕರರಿಗೆ 15000 ರೂ.ಗಳನ್ನು ಹಾಗೂ ತರಬೇತಿ ನೌಕರರಿಗೆ 5000 ರೂ.ಗಳನ್ನು ಎಲ್ಲ ಸೆ.30 ರಂದು ಪಾವತಿಸಲು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಎಂಡಿ ಅನುಮೋದನೆ ನೀಡಿದ್ದಾರೆ.
ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಬಿಎಂಟಿಸಿ ಎಂಡಿ ರಾಮಚದ್ರನ್ ಈ ಮೊತ್ತವನ್ನು ಸೆಪ್ಟೆಂಬರ್ ವೇತನದಲ್ಲಿ ಕಡಿತಗೊಳಿಸಲು ಎಲ್ಲ ಅಧಿಕಾರಿಗಳು ಪಾಲನೆ ಮಾಡುವಂತೆ ತಿಳಿಸಿದ್ದಾರೆ.
ಇನ್ನು ಈ ಸಂಬಂಧ ಇಂದು ಬೆಳಗ್ಗೆ ಅಂದರೆ ಸೆ.30 ರಂದು ಕೇಂದ್ರ ಕಚೇರಿಯಿಂದ ಎಲ್ಲ ವಿಭಾಗಗಳಿಗೆ ನಿಧಿ ವರ್ಗಾವಣೆ ಮಾಡಲಾಗಿದೆ. ಆದ್ದರಿಂದ, ಈ ನಿಧಿಯನ್ನು ಉಪಯೋಗಿಸಿ ತಮ್ಮ ವಿಭಾಗದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ವೇತನ ಮುಂಗಡವನ್ನು ಸೆ.30 ರಂದು ನೌಕರರ ಕುಂದು ಕೊರತೆಗೆ ಅಸ್ಪದ ನೀಡದಂತೆ NEFT/RTGS ಮುಖಾಂತರ ಪಾವತಿಸಬೇಕು ಎಂದು ತಿಳಿಸಿದ್ದಾರೆ.
ಈ ಮುಂಗಡ ಮೊತ್ತವನ್ನು ಪಾವತಿಸುವ ಸಂದರ್ಭದಲ್ಲಿ ನೌಕರರು ಈ ಹಿಂದಿನ ತಿಂಗಳಲ್ಲಿ ಪಡೆದ ನಿವ್ವಳ ವೇತನ ಮತ್ತು ಸೆಪ್ಟೆಂಬರ್ ತಿಂಗಳ ಹಾಜರಾತಿಗೆ ಅನುಗುಣವಾಗಿ ಸೆಪ್ಟೆಂಬರ್-2025ರ ವೇತನದಲ್ಲಿ ಕಡ್ಡಾಯವಾಗಿ ಕಡಿತಗೊಳಿಸುವುದನ್ನು ಗಮನದಲ್ಲಿರಿಸಿಕೊಂಡು ಪಾವತಿಸಲು ಕ್ರಮಕೈಗೊಳ್ಳಬೇಕು.
ಮನವಿ ಮಾಡಿದ್ದ ಕೂಟದ ಪದಾಧಿಕಾರಿಗಳು : ಬೆಂಗಳೂರಿನ ಶಾಂತಿ ನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ನೌಕರರ ಕೂಟ ವ್ಯವಸ್ಥಾಪಕ ನಿರ್ದೇಶಕರನ್ನು ಸೆ.24ರಂದು ಭೇಟಿಯಾಗಿ ನಾಡಹಬ್ಬ ದಸರಾ ನಿಮಿತ್ತ ವೇತನವನ್ನು 30.09.2025 ರಂದು ಪಾವತಿ ಮಾಡಲು ವಿನಂತಿಸಿ ಮನವಿಪತ್ರ ಸಲ್ಲಿಸಿದರು. ಈ ವೇಳೆ ವ್ಯವಸ್ಥಾಪಕ ನಿರ್ದೇಶಕರು ಸಕಾರಾತ್ಮಕವಾಗಿ ಸ್ಪಂದಿಸಿ ಸೆ.30 ರಂದು ವೇತನದ ಬದಲಾಗಿ 15000 ರೂ.ಗಳನ್ನು ಮುಂಗಡ ಪಾವತಿ ಮಾಡಲು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದರು.
ರಾಜ್ಯದ ಅತಿದೊಡ್ಡ ನಾಡಹಬ್ಬವಾದ ನವರಾತ್ರಿ ಹಬ್ಬವು ಈಗಾಗಲೇ ಪ್ರಾರಂಭವಾಗಿದ್ದು, ಅಕ್ಟೋಬರ್ ತಿಂಗಳ ಒಂದನೇ ತಾರೀಖು ಆಯುಧ ಪೂಜೆ ಹಾಗೂ ಎರಡನೇ ತಾರೀಖು ವಿಜಯ ದಶಮಿಯಾಗಿದ್ದು, ಸಾರಿಗೆ ನೌಕರರು ಈ ಹಬ್ಬವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಭಕ್ತಿ ಮತ್ತು ಸಂಭ್ರಮದಿಂದ ಆಚರಣೆ ಮಾಡಲಾಗುವುದು.

ಈ ನಡುವೆ ನಮ್ಮ ಬಿಎಂಟಿಸಿ ಸಂಸ್ಥೆಯ ನೌಕರರಿಗೆ ವೇತನವು ತಿಂಗಳ 5ನೇ ತಾರೀಖು ಆಗುವುದರಿಂದ ನಮ್ಮ ನೌಕರರು ನಾಡಹಬ್ಬವನ್ನು ವೇತನವಿಲ್ಲದೆ ಆಚರಣೆ ಮಾಡಲು ಸಾಲ ಅಥವಾ ಇತರೆ ಮೂಲಗಳಿಂದ ಹಣವನ್ನು ಹೊಂದಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಬರುತ್ತದೆ.
ಈಗಾಗಲೇ ಕೆ.ಕೆ.ಆರ್.ಟಿ.ಸಿ. ಮತ್ತು ಕೆ.ಎಸ್.ಆರ್.ಟಿ.ಸಿ. ಹಾಗೂ NWKRTC ಸಾರಿಗೆ ನಿಗಮಗಳು ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಮುನ್ನವೇ ಸೆಪ್ಟೆಂಬರ್ ತಿಂಗಳ ವೇತನವನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, BMTC ಸಂಸ್ಥೆಯ ನೌಕರರು ಈ ಬಾರಿಯ ನಾಡಹಬ್ಬವನ್ನು ಭಕ್ತಿ ಮತ್ತು ಸಂಭ್ರಮದಿಂದ ಆಚರಣೆ ಮಾಡಲು ಸೆಪ್ಟೆಂಬರ್ ತಿಂಗಳ ವೇತನವನ್ನು ಈ ತಿಂಗಳ ಕೊನೆಯ ದಿನವೇ ನೀಡಲು ಕ್ರಮವಹಿಸಬೇಕೆಂದು ಕೋರಿದ್ದರು.
ನಿರ್ವಾಹಕ ಅನಿಲ್ ಕುಮಾರ್: ಇನ್ನು ಹಗಲಿರುಳು ಎನ್ನದೆ ಡ್ಯೂಟಿ ಮಾಡುತ್ತಿರುವ ಬಿಎಂಟಿಸಿ ನೌಕರರು ಆಯುಧ ಪೂಜೆಗೆ ಸಂಬಳ ಇಲ್ಲದೆ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಾರಿಗೆ ಸಂಸ್ಥೆಗೆ ಹಲವು ಪ್ರಶಸ್ತಿಗಳು ಬರುವುದಕ್ಕೆ ಕಾರಣ ಕರ್ತರಾದ ನೌಕರರು ಹಣವಿಲ್ಲದೆ ಆಯುಧ ಪೂಜೆ ಹಬ್ಬ ಮಾಡುವ ಸ್ಥಿತಿ ಬಂದಿದೆ.
ಈಗಾಗಲೇ KSRTC, NWKRTC ಹಾಗೂ KKRTC ನಿಗಮಗಳ ನೌಕರರಿಗೆ ಸೆಪ್ಟೆಂಬರ್ 30 ರಂದು ವೇತನ ನೀಡಲು ಆದೇಶಿಸಲಾಗಿದೆ. ಆದರೆ BMTC ನೌಕರರಿಗೆ ಇನ್ನೂ ಆದೇಶ ನೀಡಿಲ್ಲ ಎಂದು ಘಟಕ-21ರ ನಿರ್ವಾಹಕ ಅನಿಲ್ ಕುಮಾರ್ “ವಿಜಯಪಥ”ದ ಮೂಲಕ ಎಂಡಿ ಅವರಿಗೆ ತಿಳಿಸಿದ್ದರು.
ಈ ರೀತಿ ಬಿಎಂಟಿಸಿ ನೌಕರರಿಗೆ ತಾರತಮ್ಯ ಯಾಕೆ? ದಯವಿಟ್ಟು ನಮಗೂ ಆಯುಧ ಪೂಜೆ ದಸರಾ ಹಬ್ಬ ಮಾಡಲು ಸೆ.30 ರಂದು ವೇತನ ನೀಡಬೇಕೆಂದು ಸಮಸ್ತ ನೌಕರರ ಪರವಾಗಿ ಮನವಿ ಮಾಡಿದ್ದರು ಈ ಬಗ್ಗೆ ವಿಜಯಫ ನ್ಯೂಸ್ ಮಾಧ್ಯಮ ಕೂಡ ನಿನ್ನೆ ವರದಿ ಮಾಡಿತ್ತು. ಈ ಎಲ್ಲವನ್ನು ಮನಗಂಡ ಎಂಡಿ ಇಂದು ಬೆಳಗ್ಗೆ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಸಮಗ್ರವಾಗಿ ವರದಿ ಮಾಡಿದಕ್ಕೆ ನೌಕರರು ಹಾಗೂ ಕೂಟದ ಪದಾಧಿಕಾರಿಗಳು “ವಿಜಯಪಥ”ಕ್ಕೆ ಅಭಿನಂದನೆ ತಿಳಿಸಿದ್ದು, ನಿಮ್ಮ ವರದಿಯಿಂದ ಇಂದು ನೌಕರರು ಮುಂಗಡ ವೇತನ ಪಡೆಯುವ ಆದೇಶ ಬಂದಿದೆ ಎಂದು ಖುಷಿ ಪಡುತ್ತಿದ್ದಾರೆ.
Related
