ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ನಿರಂತರವಾಗಿ ಮೂರು ವರ್ಷಗಳ ಕಾಲ ಹಲವು ವಿಭಾಗಗಳಲ್ಲಿ ಎಂಡಿಗಳ ಸಹಿಗಳನ್ನು ಫೋರ್ಜರಿ ಮಾಡಿ ಕೋಟಿ ಕೋಟಿ ರೂ.ಗಳನ್ನು ಕೊಳ್ಳೆಹೊಡೆದಿದ್ದಾರೆ ಎಂಬ ಆರೋಪ ಹೊತ್ತಿರುವ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ) ಸೇರಿ ವಿವಿಧ ಹಂತಗಳಲ್ಲಿನ 8 ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಿತು.
ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ 68ನೇ ಹಾಲ್‌ನಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆಯಲ್ಲಿ ವಿವಿಧ ಹಂತದಲ್ಲಿ ಒಟ್ಟು 4 ಮಂದಿ ವಕೀಲರು ಆರೋಪಿಗಳ ಪರ ವಕಾಲತ್ತು ವಹಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಖಾಸಿಂ ಚೂರಿಖಾನ್ ಅವರಿದ್ದ ನ್ಯಾಯಪೀಠ ಇದೇ ಆ.19ಕ್ಕೆ ವಿಚಾರಣೆಯನ್ನು ಮುಂದೂಡಿತು.
ಆರೋಪಿಗಳ ಪರ ವಕೀಲರಾದ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು, ಶಿವಮೂರ್ತಿ, ಶ್ರೀನಿವಾಸ್ ಕುಮಾರ್, ಪ್ರಕಾಶ್ ಅವರು ವಾದ ಮಂಡಿಸಿದರು.
ಈ ವೇಳೆ ಶಿವರಾಜು ಅವರು ಐಎಎಸ್ ಅಧಿಕಾರಿಗಳು ತಮ್ಮ ಸಹಿ ನಕಲಾಗಿದೆ ಎಂದು ತಿಳಿದ ಕೂಡಲೇ ಏಕೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿಲ್ಲ. ಅದನ್ನು ಬಿಟ್ಟು ರಮ್ಯಾ ಅವರ ಮೂಲಕ ಏಕೆ ದೂರು ಕೊಡಿಸಿದ್ದಾರೆ ಎಂದು ವಾದ ಮಂಡಿಸಿದರು.
ಪ್ರಕರಣವೇನು, ಆರೋಪಿಗಳಾರು?: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಪೊರೇಷನ್ ಕಾರ್ಯದರ್ಶಿ ಶ್ರೀರಾಮ್ ಮುಲ್ಕಾವನ್ ( ಹಗರಣ ನಡೆದಾಗ ಬಿಎಂಟಿಸಿಯಲ್ಲಿ ಮುಖ್ಯ ಸಂಚಾರ ನಿಯಂತ್ರಕರಾಗಿದ್ದರು), ಶಾಮಲಾ ಎಸ್. ಮದ್ದೋಡಿ, ವಿಭಾಗೀಯ ಸಂಚಾರಿ ಅಧಿಕಾರಿ ಮತ್ತು ಸಹಾಯಕ ಸಂಚಾರ ವ್ಯವಸ್ಥಾಪಕರಾದ ಮಮತಾ, ಗುಣಶೀಲಾ, ಸಹಾಯಕ ಸಂಚಾರ ಅಧೀಕ್ಷಕಿ ಅನಿತಾ, ಸತೀಶ್, ಸಂಚಾರ ನಿರೀಕ್ಷಕ ಗೋಪಿ ಹಾಗೂ ಕಿರಿಯ ಸಹಾಯಕ ಪ್ರಕಾಶ್ ಆರೋಪಿಗಳಾಗಿದ್ದಾರೆ.
ಬಿಎಂಟಿಸಿ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ಗಳು, ವಾಣಿಜ್ಯ ಮಳಿಗೆಗಳು, ಪಾರ್ಕಿಂಗ್ ಜಾಗಗಳು, ಶೌಚಾಲಯಗಳನ್ನು ಒಳಗೊಂಡಂತೆ ವಿವಿಧ ಪ್ರಕಾರದ ಟೆಂಡರ್ ಮತ್ತು ಪರವಾನಗಿ ನವೀಕರಣ ಹಾಗೂ ಮರುಟೆಂಡರ್‌ನಲ್ಲಿ ಹತ್ತಾರು ಕೋಟಿ ರೂ.ಗಳನ್ನು ನೇರವಾಗಿಯೇ ಈ ಅಧಿಕಾರಿಗಳು ಕೊಳ್ಳೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಶಾಂತಿನಗರದ ಕೇಂದ್ರ ಕಚೇರಿಯ ಬಿಎಂಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತ ಅಧಿಕಾರಿ ಸಿ.ಕೆ.ರಮ್ಯಾ ಅವರು ನೀಡಿದ ದೂರಿನ ಆಧಾರದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೊದಲ ಪ್ರಕರಣವು ನಾಲ್ಕು ವಂಚನೆಗಳಿಗೆ ಸಂಬಂಧಿಸಿದೆ ಮತ್ತು ಎರಡನೆಯದು ಮೂರು ವಂಚನೆಗಳಿಗೆ ಸಂಬಂಧಿಸಿದ್ದಾಗಿದೆ.
ಐಎಎಸ್ ಅಧಿಕಾರಿಗಳಾದ ಅನ್ಬುಕುಮಾರ್, ಡಾ. ರೇಜು ಕುಮಾರ್ ಮತ್ತು ಸಿ. ಶಿಖಾ ಮತ್ತು ಪ್ರಸ್ತುತ ಎಂಡಿ ಜಿ.ಸತ್ಯವತಿ, ಐಪಿಎಸ್ ಅಧಿಕಾರಿ ಕೆ.ಅರುಣ್, ಆಗಿನ ನಿರ್ದೇಶಕ (ಭದ್ರತೆ ಮತ್ತು ವಿಜಿಲೆನ್ಸ್) ಮತ್ತು ಐಎಫ್‌ಎಸ್ ಅಧಿಕಾರಿ ಸೂರ್ಯಸೇನ್, ಆಗಿನ ನಿರ್ದೇಶಕ (ಐಟಿ ಸೆಲ್) ಇತರ ಅಧಿಕಾರಿಗಳ ಸಹಿಯನ್ನು ಆರೋಪಿಗಳು ಬಳಸಿಕೊಂಡು ಮಾರ್ಚ್ 9, 2020 ಮತ್ತು ಜುಲೈ 27, 2023 ರ ನಡುವೆ ವಂಚನೆ ಮಾಡಿದ್ದಾರೆ ಎಂದು ಜುಲೈ 27 ರಂದು ರಮ್ಯಾ ದೂರು ನೀಡಿದ್ದಾರೆ.
ಈ ದೂರಿನ ಆಧಾರದ ಮೇರೆಗೆ ಭಾರತೀಯ ದಂಡನೆಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ), 465 (ನಕಲಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), 471 (ನಕಲಿ ಎಂದು ಬಳಸಿ), ಮತ್ತು 408 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣಗಳ ಸಂಬಂಧ ಇಂದು (ಆ.11) ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ 68ನೇ ಹಾಲ್‌ನಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆಯಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಆ.19ಕ್ಕೆ ಮುಂದೂಡಿದರು.