ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಅಕ್ಟೋಬರ್ ಮೊದಲ ವಾರದಲ್ಲಿ ದಸರಾ ಹಬ್ಬ ಇರುವುದರಿಂದ ಸಂಸ್ಥೆಯ ನೌಕರರ ಹಿತದೃಷ್ಟಿಯಿಂದ ದಸರಾ ಹಬ್ಬಕ್ಕೆ ಮುಂಚಿತವಾಗಿ ವೇತನ ಮುಂಗಡವಾಗಿ ಕಾಯಂ ನೌಕರರಿಗೆ 15000 ರೂ.ಗಳನ್ನು ಹಾಗೂ ತರಬೇತಿ ನೌಕರರಿಗೆ 5000 ರೂ.ಗಳನ್ನು ಎಲ್ಲ ಸೆ.30 ರಂದು ಪಾವತಿಸಲು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಎಂಡಿ ಅನುಮೋದನೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಎಲ್ಲ ನೌಕರರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ.
ಮಂಗಳವಾರ ಅಂದರೆ ನಿನ್ನೆ ಆದೇಶ ಹೊರಡಿಸಿರುವ ಬಿಎಂಟಿಸಿ ಎಂಡಿ ರಾಮಚಂದ್ರನ್ ಈ ಮೊತ್ತವನ್ನು ಸೆಪ್ಟೆಂಬರ್ ವೇತನದಲ್ಲಿ ಕಡಿತಗೊಳಿಸಲು ಎಲ್ಲ ಅಧಿಕಾರಿಗಳು ಪಾಲನೆ ಮಾಡುವಂತೆ ತಿಳಿಸಿದ್ದಾರೆ.
ಇನ್ನು ವೇತನ ಮುಂಗಡವಾಗಿ ಪಾವತಿಸುವ ಸಂಬಂಧ ಸೆ.30 ರಂದು ಕೇಂದ್ರ ಕಚೇರಿಯಿಂದ ಎಲ್ಲ ವಿಭಾಗಗಳಿಗೆ ನಿಧಿ ವರ್ಗಾವಣೆ ಮಾಡಿ, ಈ ನಿಧಿಯನ್ನು ಉಪಯೋಗಿಸಿ ತಮ್ಮ ವಿಭಾಗದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ವೇತನ ಮುಂಗಡವನ್ನು ಸೆ.30 ರಂದು ನೌಕರರ ಕುಂದು ಕೊರತೆಗೆ ಅಸ್ಪದ ನೀಡದಂತೆ NEFT/RTGS ಮುಖಾಂತರ ಪಾವತಿಸಬೇಕು ಎಂದು ತಿಳಿಸಿದ್ದರು.
ಈ ಮುಂಗಡ ಮೊತ್ತವನ್ನು ಪಾವತಿಸುವ ಸಂದರ್ಭದಲ್ಲಿ ನೌಕರರು ಈ ಹಿಂದಿನ ತಿಂಗಳಲ್ಲಿ ಪಡೆದ ನಿವ್ವಳ ವೇತನ ಮತ್ತು ಸೆಪ್ಟೆಂಬರ್ ತಿಂಗಳ ಹಾಜರಾತಿಗೆ ಅನುಗುಣವಾಗಿ ಸೆಪ್ಟೆಂಬರ್-2025ರ ವೇತನದಲ್ಲಿ ಕಡ್ಡಾಯವಾಗಿ ಕಡಿತಗೊಳಿಸುವುದನ್ನು ಗಮನದಲ್ಲಿರಿಸಿಕೊಂಡು ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದರು.
ರಾಜ್ಯ ಸರ್ಕಾರದ ಸಾರಿಗೆಯ ಮೂರು ನಿಗಮಗಳಾದ KSRTC, NWKRTC ಹಾಗೂ KKRTC ನೌಕರರಿಗೆ ಸೆ.30ರಂದೆ ವೇತನ ಕೈ ಸೇರಿತ್ತು. ಅದರಲ್ಲಿ KSRTC ನೌಕರರಿಗೆ ಪೂರ್ಣ ಪ್ರಮಾಣದ ವೇತನ ಸೆ.30ರಂದೆ ಕೈ ಸೇರಿದ್ದರೆ, ಬಿಎಂಟಿಸಿ ನೌಕರರು ಆಯುಧ ಪೂಜೆಗೆ ಸಂಬಳ ಇಲ್ಲದೆ ಹಬ್ಬ ಮಾಡಬೇಕು ಎಂದು ಹೇಳಲಾಗುತ್ತಿತ್ತು. ಆದರೆ, ಅದನ್ನು ಮನಗಂಡ ಎಂಡಿ ರಾಮಚಂದ್ರನ್ ಸೆ.30ರಂದು ಬೆಳಗ್ಗೆ ಆದೇಶ ಹೊರಡಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಬಿಎಂಟಿಸಿಯ ಎಲ್ಲ ಕಾಯಂ ನೌಕರರಿಗೆ 15000 ರೂ. ಹಾಗೂ ತರಬೇತಿ ನೌಕರರಿಗೆ 5000 ರೂ.ಗಳನ್ನು ಇಂದು ಪಾವತಿ ಮಾಡಲಾಗಿದ್ದು, ಈ ನೌಕರರು ಕೂಡ ಇತರ ಮೂರು ನಿಗಮಗಳ ನೌಕರರಂತೆ ಸಂಭ್ರಮದಿಂದ ಹಬ್ಬ ಆಚಚರಣೆಯಲ್ಲಿ ತೊಡಗಿದ್ದಾರೆ.

ಇನ್ನು ಈ ವೇತನ ಸಂಬಂಧವಾಗಿ ಸಮಗ್ರವಾಗಿ ವಿಜಯಪಥ ವರದಿ ಮಾಡಿತ್ತು. ಈ ವರದಿಯಿಂದ ಎಂಡಿ ನೌಕರರಿಗೆ ಮುಂಗಡ ವೇತನ ಪಾವತಿಸಲು ಆದೇಶ ಮಾಡಿದ್ದು ನೌಕರರಿಗೆ ಖುಷಿ ನೀಡಿದೆ.
Related
