ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಎಲೆಕ್ಟ್ರಿಕ್ ಬಸ್ಗಳಿಗೆ (Electric Buses) ಗುತ್ತಿಗೆ ಆಧಾರದಲ್ಲಿ ಕನ್ನಡ ಭಾಷೆಯೇ ಬರದ ಮತ್ತು ಬಸ್ ಚಾಲನೆಯ ಅನುಭವವೇ ಇರದ ಕೇರಳದ ಸಣ್ಣಪುಟ್ಟ ಹುಡುಗರನ್ನು ಚಾಲಕರನ್ನಾಗಿ ನೇಮಕ ಮಾಡಿದೆ ಎಂಬ ಆರೋಪಿ ಕನ್ನಡಪರ ಸಂಘಟನೆ ಮುಖಂಡರು ಬಿಎಂಟಿಸಿ ಕೇಂದ್ರ ಕಚೇರಿ ಬಳಿ ಪ್ರತಿಭಟನೆ ಮಾಡಿದರು.
ಬಳಿಕ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರನ್ನು ಭೇಟಿ ಮಾಡಿದರು. ಈ ವೇಳೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಇದು ಖಾಗಿಯವರಿಗೆ ಗುತ್ತಿಗೆ ಕೊಟ್ಟಿರುವುದರಿಂದ ನಮ್ಮ ಗಮನಕ್ಕೆ ಬಂದರೂ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ ಎಂಬಂತೆ ಒಂದು ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡರು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇನ್ನು ಬಿಎಂಟಿಸಿಯಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಬಸ್ಗಳಿವೆ. ಅವುಗಳಲ್ಲಿ ಸುಮಾರು ಎಲೆಕ್ಟ್ರಿಕ್ 648 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಮೂರು ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ. ಆ ಬಸ್ಗಳಿಗೆ ಕಂಡಕ್ಟರ್ಗಳು ಬಿಎಂಟಿಸಿಯಿಂದ, ಚಾಲಕರನ್ನು ಮಾತ್ರ ಖಾಸಗಿ ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ. ಆದರೆ ಒಂದು ಕಂಪನಿ ಮಾತ್ರ ಚಾಲಕರಿಗೆ 22,500 ರೂ. ಹಾಗೂ ವಸತಿ ವ್ಯವಸ್ಥೆ ಮಾಡುತ್ತೇವೆ ಎಂದು ಕೆಲಸಕ್ಕೆ ತೆಗೆದುಕೊಂಡು ಈಗ 14ರಿಂದ 18 ಸಾವಿರ ರೂ. ಮಾತ್ರ ನೀಡುತ್ತಿದೆ. ಉಳಿದಂತೆ ಯಾವುದೇ ಸೌಲಭ್ಯ ನೀಡಿಲ್ಲ.
ಇದರಿಂದ ಬೇಸತ್ತ 65ಕ್ಕೂ ಹೆಚ್ಚು ಚಾಲಕರು ಕೆಲಸ ಬಿಟ್ಟು ಹೋಗಿದ್ದಾರೆ. ಹೀಗಾಗಿ ಆ ಸ್ಥಳಕ್ಕೆ ಕೇರಳದಿಂದ ಯುವಕರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಆದರೆ ಅವರಿಗೆ ಸರಿಯಾಗಿ ಚಾಲನೆ ಮಾಡುವುದಕ್ಕೆ ಬರುತ್ತಿಲ್ಲ. ಇದಕ್ಕೂ ಮಿಗಿಲಾಗಿ ಕನ್ನಡ ಭಾಷೆಯೇ ಅವರಿಗೆ ಬರುತ್ತಿಲ್ಲ. ಅಂಥವರನ್ನು ಚಾಲನೆ ಹಾಕಿರುವುದರಿಂದ ನಿರ್ವಾಹಕರಿಗೂ ತಲೆನೋವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ವೇತನ, ವಸತಿ ವ್ಯವಸ್ಥರಯನ್ನು ಸಮರ್ಪಕವಾಗಿ ನೀಡದಿರುವುದು ಸೇರಿ ಎಲ್ಲ ಕಾರಣಗಳಿಂದ ಚಾಲಕರು ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ ಈಗಾಗಲೇ ತುಂಬಾ ಚಾಲಕರು ಕೆಲಸ ಬಿಟ್ಟು ಹೋಗಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಸಮರ್ಪಕ ವೇತನ ಕೊಡದೆ ಕಡಿಮೆ ಸಂಬಳಕ್ಕೆ ಮಲಯಾಳಿ ಚಾಲಕರನ್ನು ನೇಮಕ ಮಾಡಲಾಗುತ್ತಿದೆ.
ಬಿಎಂಟಿಸಿಯ ಕಂಡಕ್ಟರ್ಗಳಿಗೆ ಮಲೆಯಾಳಂ ಬರುವುದಿಲ್ಲ, ಕೇರಳದ ಮಲೆಯಾಳಿ ಡ್ರೈವರ್‌ಗಳಿಗೆ ಕನ್ನಡ ಬರುವುದಿಲ್ಲ. ಇದು ಕಂಡಕ್ಟರ್ಗಳ ತಲೆನೋವಿಗೆ ಕಾರಣವಾಗಿದೆ. ಬಿಎಂಟಿಸಿಯ ಅಧಿಕಾರಿಗಳ ಧನದಾಹಕ್ಕೆ (ಕಮಿಷನ್ ಆಸೆಗೆ) ಕಂಡಕ್ಟರ್ಗಳು ಹಾಗೂ ಪ್ರಯಾಣಿಕರು ಸಂಕಷ್ಟಕ್ಕೀಡಾಗುವಂತಾಗಿದೆ.
ಅನನುಭವಿ ಚಾಲಕರಿಂದ ಅಪಘಾತ ಹೆಚ್ಚಳ: ಇತ್ತ ಅನನುಭವಿ ಎಲೆಕ್ಟ್ರಿಕ್ ಬಸ್ ಚಾಲಕರಿಂದ ಈಗಾಗಲೇ ಹಲವು ಅಪಘಾತಗಳು ಸಂಭವಿಸಿವೆ. ಇದರಿಂದ ಬಿಎಂಟಿಸಿಗೆ ಕೆಟ್ಟ ಹೆಸರು ಎಂದು ಕಂಡಕ್ಟರ್ಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಎಂಟಿಸಿಯಲ್ಲಿ ಎಲ್ಲಾ ಕಂಡಕ್ಟರ್ಗಳಿಗೂ ಬೆಂಗಳೂರಿನ ರೂಟ್ಗಳು ಗೊತ್ತಿದೆ. ಆದರೆ ಈ ಕೇರಳದ ಮಲಯಾಳಿ ಚಾಲಕರಿಗೆ ಬಲಕ್ಕೆ ಎಂದರೂ ಗೊತ್ತಾಗುತ್ತಿಲ್ಲ, ಎಡಕ್ಕೆ ಅಂದರೂ ಗೊತ್ತಿಲ್ಲ ಎಂದು ಕಂಡಕ್ಟರ್ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಯಮ ಉಲ್ಲಂಘಿಸಿ ಚಾಲಕರ ನೇಮಕ: ಇನ್ನು ಎರಡು ವಾರಗಳ ಹಿಂದಷ್ಟೇ, ಸರಿಯಾಗಿ ಸಂಬಳ ಕೊಡಲಿಲ್ಲ ಎಂದು ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ನಿಲ್ಲಿಸಿ ಚಾಲಕರು ಮುಷ್ಕರ ಮಾಡಿದ್ದರು. ಈಗ ಎಲೆಕ್ಟ್ರಿಕ್ ಬಸ್ ಕಂಪನಿಗಳು ಹದಿನೈದು ಸಾವಿರ ಸಂಬಳಕ್ಕೆ ಕೇರಳದ ಯುವಕರನ್ನು ಕರೆದುಕೊಂಡು ಬಂದು ಬಸ್ಗಳ ಚಾಲನೆಯ ಹೊಣೆ ನೀಡಿವೆ.
ಇತ್ತ ಬಿಎಂಟಿಸಿಯಲ್ಲಿ ಚಾಲಕರಾಗಬೇಕು ಎಂದರೆ ನಿಯಮ ಪ್ರಕಾರ SSLC ಪಾಸ್ ಆಗಿರಬೇಕು. ಹೆವಿ ಡ್ರೈವಿಂಗ್ ಲೈಸನ್ಸ್ ಇರಬೇಕು ಮತ್ತು ಎರಡು ವರ್ಷ ಅನುಭವ ಇರಬೇಕು. ಆದರೆ ಖಾಸಗಿ ಎಲೆಕ್ಟ್ರಿಕ್ ಬಸ್ ಕಂಪನಿಗಳು ನಿಯಮ ಉಲ್ಲಂಘಿಸಿ ಅನುಭವವೇ ಇಲ್ಲದ ಸಣ್ಣಪುಟ್ಟ ಹುಡುಗರನ್ನು ನೇಮಕ ಮಾಡಿಕೊಂಡಿದ್ದು ಈಗಾಗಲೆ 10-15 ಮಂದಿ ಬಸ್ ಓಡಿಸುತ್ತಿದ್ದಾರೆ.
ಎಲೆಕ್ಟ್ರಿಕ್ ಬಸ್ ಕಂಪನಿಗಳು ಕಡಿಮೆ ವೇತನಕ್ಕೆ ಕನ್ನಡ ಭಾಷೆ ಬರದ ಸಣ್ಣಪುಟ್ಟ ಯುವಕರಿಗೆ ನೂರಾರು ಜನ ಪ್ರಯಾಣ ಮಾಡುವ ಬಸ್ ಕೊಟ್ಟು ಕರ್ತವ್ಯ ಮಾಡಿಸಲು ಮುಂದಾಗಿರುವುದು ನಿಜಕ್ಕೂ ದುರಂತ. ಬಿಎಂಟಿಸಿ ಎಂಡಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರತಿಭಟನ ನಿರತರು ಆಗ್ರಹಿಸಿದರು.