BMTC ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣ: ಕಠಿಣ ಕ್ರಮಕ್ಕೆ ಆಯುಕ್ತರು, ಗೃಹ ಸಚಿವರಿಗೆ ಸಾರಿಗೆ ಸಚಿವರ ಆಗ್ರಹ

ಬೆಂಗಳೂರು: ತಾನು ಕೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಮೂರು ದಿನದ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಚಾಲಕನಿಗೆ ಮಹಿಳಾ ಟೆಕ್ಕಿ ಉದ್ಯೋಗಿಯೊಬ್ಬರು ಚಪ್ಪಲಿಯಿಂದ ಹೊಡೆದ ಘಟನೆ ಸಂಬಂಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾನುವಾರ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇದೇ ರೀತಿಯ ಘಟನೆಗಳು ನಮ್ಮ ಸಾರಿಗೆ ಸಿಬ್ಬಂದಿ ಮೇಲೆ ಆಗಾಗ ಮರುಕಳಿಸುತ್ತಲೇ ಇವೆ. ಜನರಿಗಾಗಿ ಸೇವೆ ನೀಡುವ ನಮ್ಮ ನೌಕರರ ಮೇಲಿನ ಹಲ್ಲೆ ತಡೆಗೆ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿ ಮೇಲೆ ಹಲ್ಲೆ, ಅವಮಾನ ಮಾಡಿದ ಬೆನ್ನಲ್ಲೆ ರಾಮಲಿಂಗಾ ರೆಡ್ಡಿ ಅವರು ಗೃಹ ಸಚಿವರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಹಿಂದೆಯೂ ಹಲವಾರು ಈ ರೀತಿಯ ಪ್ರಕರಣಗಳು ನಡೆದಿದ್ದು, ನಾನು ಪೊಲೀಸ್ ಆಯುಕ್ತರು ಬೆಂಗಳೂರು ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ತೆಗೆದುಕೊಳ್ಳಲು ಹಾಗೂ ಈ ಸಂಬಂಧ ಖುದ್ದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ವಿವರಿಸಲು ಕೂಡ ಸೂಚಿಸಿದ್ದೇನೆ. ಈ ಎಲ್ಲ ಕ್ರಮಗಳ ಹೊರತಾಗಿಯೂ ಮತ್ತೊಂದು ಪ್ರಕರಣವು ಎರಡು ದಿನಗಳಿಂದಷ್ಟೇ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಆಘಾತಕಾರಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಹಿಳಾ ಟೆಕ್ಕಿ ತಾವು ಕೋರಿದ ಕಡೆ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಚಾಲಕ ಹುಸೇನ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇತ್ತೀಚೆಗೆ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಇಂತಹ ಹಲ್ಲೆ ಮತ್ತು ಅವಮಾನಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಕಿಡಿಗೇಡಿಗಳು ಪ್ರಾಣಕ್ಕೆ ಸಂಚಕಾರ ತರುವಂತಹ ಪ್ರಯತ್ನವನ್ನೂ ಮಾಡಿದ್ದಾರೆ. ಈ ಹಿಂದೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆಯೂ ನಡೆದಿತ್ತು. ಹೀಗಾಗಿ, ಇಂತಹ ನಡೆಯನ್ನು ತಪ್ಪಿಸಲು ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಾಲ್ಕೂ ನಿಗಮಗಳ ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಹಿತರಕ್ಷಣೆ ನಮ್ಮ ಬದ್ಧತೆಯಾಗಿದ್ದು, ನಮ್ಮ ಇಲಾಖೆಯ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆ ಮತ್ತು ಅವಮಾನವನ್ನು ಸಹಿಸಲಾಗದು. ನಮ್ಮ ಸಿಬ್ಬಂದಿಯಿಂದ ಏನಾದರೂ ಪ್ರಮಾದವಾದರೆ, ದೂರು ನೀಡಿದ ಕೂಡಲೇ ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಾವು ಕೂಡ ಮುಲಾಜಿಲ್ಲದೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ.

ಆದರೆ, ಕಾನೂನು ಮೀರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಹೀಗಾಗಿ, ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ತಡೆಯಲು ಶಾಶ್ವತ ಪರಿಹಾರವನ್ನು ರೂಪಿಸುವಂತೆ ಗೃಹ ಸಿಚುವರು ಹಾಗೂ ಪೊಲೀಸ್ ಆಯಕ್ತರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.
Related
