BMTC ಘಟಕ-16: ಬೆಳಗ್ಗೆಯಿಂದ ಬಸ್‌ಗಳನ್ನು ಹೊರತೆಗೆಯದೇ ಎಲೆಕ್ಟ್ರಿಕ್ ಬಸ್ ಚಾಲಕರ ಪ್ರತಿಭಟನೆ- ಮುಂದುವರಿಕೆ


ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದೀಪಾಂಜಲಿ ನಗರ ಬಿಎಂಟಿಸಿ 16ನೇ ಘಟಕದ ಎಲೆಕ್ಟ್ರಿಕ್ ಬಸ್ ಚಾಲಕರು ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಬೆಳಗ್ಗೆಯಿಂದ ಬಸ್‌ಗಳನ್ನು ಹೊರತೆಗೆಯದೆ ನಿರಂತರವಾಗಿ 4ಗಂಟೆಗೂ ಹೆಚ್ಚು ಕಾಲದಿಂದ ಪ್ರತಿಭಟನೆ ಮಾಡುತ್ತಿದ್ದಾರೆ.
ಇಂದು ಮುಂಜಾನೆ 5.30ರಿಂದ ಪ್ರತಿಭಟನೆ ಮಾಡುತ್ತಿರುವ ಚಾಲಕರು ನಮಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಪ್ರಮುಖವಾಗಿ ಟ್ರಾಫಿಕ್ ಜಾಮ್ ಹೆಚ್ಚಾಗಿರೂ ಕೂಡ ಎಲ್ಲ ಟ್ರಿಪ್‌ಗಳನ್ನು ಪೂರ್ಣಗೊಳಿಸಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ. ಈ ಟ್ರಾಫಿಕ್ ಜಾಮ್‌ನಲ್ಲಿ ನಾವು ಹೇಗೆ ಎಲ್ಲ ಟ್ರಿಪ್‌ಗಳನ್ನು ಮಾಡಲಾಗುತ್ತದೆ. ಇದು ಸಾಧ್ಯವಿಲ್ಲ ಎಂದು ಬಸ್‌ಗಳನ್ನು ಡಿಪೋದಲ್ಲೇ ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂಧ ಖಾಸಗಿ ಗುತ್ತಿಗೆದಾರ ಕಂಪನಿಯ ವ್ಯವಸ್ಥಾಪಕರು ನಿಮ್ಮ ಬೇಡಿಕೆ ಈಡೇರಿಸುವ ಸಂಬಂಧ ನಮ್ಮ ಮೇಲಧಿಕಾರಿಗಳು ಹಾಗೂ ಮಾಲೀಕರ ಬಳಿ ಮಾತನಾಡುತ್ತೇವೆ ನೀವು ಡ್ಯೂಟಿಗೆ ಹೋಗಿ ಎಂದು ಮನವಿ ಮಾಡಿದರು.
ಆದರೆ, ವ್ಯವಸ್ಥಾಪಕರ ಮನವಿಗೆ ಮಣಿಯದ ಎಲೆಕ್ಟ್ರಿಕ್ ಬಸ್ ಚಾಲಕರು ನಮ್ಮ ಬೇಡಿಕೆ ಈಡೇರುವವರೆಗೂ ನಾವು ಡ್ಯೂಟಿಗೆ ಹೋಗುವುದಿಲ್ಲ ಎಂದು ಪಟ್ಟುಹಿಡಿದು ಕುಳಿತ್ತಿದ್ದಾರೆ.
ಇದರಿಂದ ಕೆಲ ಭಾಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಬೇರೆ ಬೇರೆ ಡಿಪೋಗಳಿಂದ ಸುಮಾರು 10ಮಂದಿ ಎಲೆಕ್ಟ್ರಿಕ್ ಬಸ್ ಚಾಲಕರನ್ನು ಕರೆಸಿಕೊಂಡು 10 ಬಸ್‌ಗಳನ್ನು ಮಾರ್ಗಕ್ಕೆ ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊನ್ನೆತಾನೆ ದೀಪಾವಳಿ ಹಬ್ಬಕ್ಕೆ ಬೋನಸ್ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್ ಚಾಲಕರು ಯಲಹಂಕ ಮತ್ತು ಜಯನಗರ ಡಿಪೋಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆ ಕಾವು ಇಳಿಯುವ ಮುನ್ನವೇ ಇಂದು ದೀಪಾಂಜಲಿ ನಗರದಲ್ಲಿರುವ ಬಿಎಂಟಿಸಿ ಘಟಕ 16ರ ಎಲೆಕ್ಟ್ರಿಕ್ ಬಸ್ ಚಾಲನಾ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ.
ಇತ್ತ ಗುತ್ತಿಗೆದಾರ ಕಂಪನಿಯಿಂದ ನೇಮಕಗೊಂಡಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದರೆ, ಅತ್ತ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಮಾಡದೆ ಸರ್ಕಾರ ಮೀನಮೇಷ ಎಣಿಸುತ್ತಿದ್ದು, ನಾಲ್ಕೂ ನಿಗಮಗಳ ಸಿಬ್ಬಂದಿಗಳು ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆ, ಸರ್ಕಾರ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರನ್ನು ಕಾಡುತ್ತಿದ್ದರೆ ಇತ್ತ ಖಾಸಗಿ ಕಂಪನಿಗಳ ಅಧೀನದಲ್ಲಿ ನಡೆಯುತ್ತಿರುವ ಎಲೆಕ್ಟ್ರಿಕ್ ಬಸ್‌ಗಳ ಚಾಲಕರಿಗೂ ಸರಿಯಾಗಿ ವೇತನ ಕೊಡುತ್ತಿಲ್ಲ ಹಾಗೂ ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.
Related
