NEWSನಮ್ಮರಾಜ್ಯಬೆಂಗಳೂರು

BMTC ಬಸ್‌: ಉಚಿತ ಟಿಕೆಟ್‌ ಹರಿದು ದರ್ಪದಿ ಬಿಸಾಡಿ “ಶಕ್ತಿ” ತೋರಿಸಲು ಮುಂದಾದ ಮಹಿಳೆ – ಸಹ ಪ್ರಯಾಣಿಕರ ಪರದಾಟ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ನಲ್ಲಿ ಶಕ್ತಿ ಯೋಜನೆಯ ಉಚಿತ ಟಿಕೆಟ್‌ ಹರಿದು ಹಾಕಿ, ಬಳಿಕ ಹಣ ಕೊಟ್ಟು ಟಿಕೆಟ್‌ ಪಡೆಯದೇ ಮಹಿಳೆಯೊಬ್ಬರು ದರ್ಪ ಮೆರೆದು ಸಹ ಪ್ರಯಾಣಿರಿಗೂ ಕಿರಿಕಿರಿಯುಂಟು ಮಾಡಿರುವ ಘಟನೆ ಇತ್ತೀಚೆಗೆ ನಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತ ಚೆಕ್ಕಿಂಗ್ ಸಿಬ್ಬಂದಿ ಬಂದರೆ ನನ್ನ ಕೆಲಸ ಹೋಗುತ್ತದೆಂದು ಹೆದರಿದ ನಿರ್ವಾಹಕ ರಸ್ತೆಯಲ್ಲೇ ಬಸ್‌ ನಿಲ್ಲಿಸಿ ನೀವು ಹಣ ಕೊಟ್ಟು ಬೇರೆ ಟಿಕೆಟ್‌ ತೆಗದುಕೊಳ್ಳಿ ಇಲ್ಲ ಇಲ್ಲೇ ಇಳಿಯಿರಿ ಎಂದು ಮನವಿ ಮಾಡಿದ್ದಾರೆ. ಆದರೆ ಅದಕ್ಕೆ ಮಹಿಳೆ ಕ್ಯಾರೆ ಎಂದಿಲ್ಲ ಇದರಿಂದ ಸಹ ಪ್ರಯಾಣಿಕರು ಕೆಲ ಕಾಲ ಪರದಾಡುವಂತಾಗಿತ್ತು.

ಹೌದು! ಬೆಂಗಳೂರಿನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಉಚಿತ ಟಿಕೆಟ್‌ ವಿಚಾರದಲ್ಲಿ ಮಹಿಳೆ ದರ್ಪ ತೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಶಕ್ತಿ ಯೋಜನೆಯ ದುರುಪಯೋಗ ಅಲ್ಲವೇ? ಬಿಎಂಟಿಸಿ ಒಂದು ಸಾರ್ವಜನಿಕ ಆಸ್ತಿ, ಇಲ್ಲಿ ಅಸಂಬದ್ಧ ವರ್ತನೆಯು ಇತರೆ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತದೆ ಎಂದು ನೆಟ್ಟಿಗರು ಕೂಡ ಆ ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಮಹಿಳೆಯೊಬ್ಬರು ಸೀಟ್‌ನಲ್ಲಿ ಕುಳಿತಿದ್ದು ಅವರನ್ನು ಹಣ ಕೊಟ್ಟು ಟಿಕೆಟ್‌ ಪಡೆಯಿರಿ ಚೆಕ್ಕಿಂಗ್ ಆಫೀಸರ್ ಬಂದರೆ ನಮಗೆ ಸಮಸ್ಯೆಯಾಗುತ್ತದೆ ಎಂದು ಕಂಡಕ್ಟರ್ ಮನವಿ ಮಾಡುತ್ತಿದ್ದಾರೆ. ಆದರೆ, ಮಹಿಳೆ ಚೆಕ್ಕಿಂಗ್ ಅಧಿಕಾರಿಗಳು ಬಂದರೆ ನಾನು ಅವರಿಗೆ ಹೇಳುತ್ತೇನೆ ಎಂದು ದರ್ಪದಿಂದ ಮಾತನಾಡಿ ಹಣ ಕೊಟ್ಟು ಟಿಕೆಟ್‌ ಪಡೆಯಲು ನಿರಾಕರಿಸಿದ್ದಾರೆ.

ಇದರಿಂದ ಬೇಸತ್ತ ಇತರೆ ಪ್ರಯಾಣಿಕರು ಮಹಿಳೆ ವಿರುದ್ಧ ಕಿಡಿಕಾರಿದ್ದಾರೆ. ಜತೆಗೆ ಮಹಿಳೆಯನ್ನು ಕೆಳಗಿಳಿಸಿ ಬಸ್‌ ಸಂಚಾರ ಆರಂಭಿಸುವಂತೆ ಕಂಡಕ್ಟರ್‌ಗೆ ಒತ್ತಾಯಿಸಿದ್ದಾರೆ. ಇತ್ತ ಕಂಡಕ್ಟರ್ ನೀವೆ ಆ ಮಹಿಳೆಗೆ ಹೇಳಿ ಎಂದು ಪ್ರಯಾಣಿಕರನ್ನು ಕೇಳಿಕೊಂಡಿದ್ದಾರೆ.

ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ವರ್ತನೆ ಸಲ್ಲ: ಇತ್ತ ವಿಡಿಯೋ ಹಂಚಿಕೊಂಡಿರುವ ಕರ್ನಾಟಕ ಪೋರ್ಟ್‌ಪೋಲಿಯೋ ಟ್ವೀಟರ್ ಪೇಜ್‌, “ಈ ರೀತಿಯ ದುರಹಂಕಾರದ ಬಗ್ಗೆ ಏನು ಹೇಳಬಹುದು? ಸಾರ್ವಜನಿಕ ಸಾರಿಗೆಯನ್ನು ಬಳಸುವಾಗ ಒಬ್ಬ ವ್ಯಕ್ತಿಯು ನಿಜವಾಗಿಯೂ ಹೀಗೆಯೇ ವರ್ತಿಸಬೇಕೇ? ಸರ್ಕಾರಿ ಬಸ್‌ಗಳು ಸಾರ್ವಜನಿಕರಿಗಾಗಿ, ಯಾರೊಬ್ಬರ ವೈಯಕ್ತಿಕ ಆಸ್ತಿ ಅಥವಾ ಖಾಸಗಿ ಸ್ಥಳಕ್ಕಾಗಿ ಅಲ್ಲ.

ಎಲ್ಲ ಹಂತದ ಪ್ರಯಾಣಿಕರು ಪ್ರತಿದಿನ ಪ್ರಯಾಣಿಸುವ ಸಾರ್ವಜನಿಕ ಸ್ಥಳದಲ್ಲಿ ಇಂತಹ ನಡವಳಿಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ಸರಿಯಾದ ನಡವಳಿಕೆಯಲ್ಲ, ವಿಶೇಷವಾಗಿ ಸಾಮಾನ್ಯ ಜನರ ಅನುಕೂಲಕ್ಕಾಗಿ ಮತ್ತು ಇವರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮೂಲಭೂತ ಶಿಸ್ತು, ಜವಾಬ್ದಾರಿ ಮತ್ತು ಗೌರವವನ್ನು ನಿರೀಕ್ಷಿಸಲಾಗುತ್ತದೆ. ಈ ರೀತಿಯ ನಡವಳಿಕೆ ಸಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಟಿಕೆಟ್‌ಗಳನ್ನು ಎಸೆಯುವುದು ಮತ್ತು ಕಂಡಕ್ಟರ್ ಮತ್ತು ಇತರ ಪ್ರಯಾಣಿಕರೊಂದಿಗೆ ವಾದ ಮಾಡುವುದನ್ನು ಸಹಿಸಲಾಗುವುದಿಲ್ಲ ಎಂದು ಕಿಡಿಕಾರಿದೆ.

ಕಂಡಕ್ಟರ್‌ಗಳಿಗೆ ತಲೆನೋವಾದ ಉಚಿತ ಟಿಕೆಟ್‌ ವಿಚಾರ: ಶಕ್ತಿ ಯೋಜನೆ ಆರಂಭವಾದ ಬಳಿಕ ಮಹಿಳೆಯರು ಉಚಿತ ಟಿಕೆಟ್‌ ಪಡೆದು ಮಾರ್ಗ ಮಧ್ಯೆದಲ್ಲಿಯೇ ಬಸ್‌ ಇಳಿದು ಹೋಗುವುದು ಅಥವಾ ಈ ರೀತಿ ಟಿಕೆಟ್‌ ಹರಿದು ಮೊಂಡುತನ ಮಾಡುತ್ತಿರುವುದರಿಂದ ಕಂಡಕ್ಟರ್‌ಗಳಿಗೆ ಸಮಸ್ಯೆಯಾಗುತ್ತಿದೆ. ಟಿಕೆಟ್‌ ಪರಿಶೀಲನೆಗೆ ಅಧಿಕಾರಿಗಳು ಬಂದಾಗ ಉಚಿತ ಪ್ರಯಾಣಕ್ಕೆ ಟಿಕೆಟ್‌ ಪಡೆದ ಮಹಿಳೆಯೇ ಇರುವುದಿಲ್ಲ. ಇದರಿಂದ ಕಂಡಕ್ಟರ್‌ಗಳಿ ನೋಟಿಸ್‌ ಕೊಡಲಾಗುತ್ತದೆ.

ಇನ್ನು ಕೆಲವೊಮ್ಮೆ ಮಹಿಳೆಯರು ಮಾರ್ಗ ಮಧ್ಯೆ ಟಿಕೆಟ್‌ ಕಳೆದುಕೊಂಡು ಹೊಸ ಟಿಕೆಟ್‌ಗೆ ಜಗಳ ಮಾಡುವ ಘಟನೆಗಳು ನಡೆದಿವೆ. ಒಟ್ಟಾರೆ ಇಲ್ಲಿ ನಿರ್ವಾಹಕರು ನಿತ್ಯ ಒತ್ತಡದಲ್ಲೇ ಕೆಲಸ ಮಾಡಬೇಕಿದ್ದು ಇದು ಭಾರಿ ತಲೆನೋವಾಗಿ ಪರಿಣಮಿಸಿದೆ.

Megha
the authorMegha

Leave a Reply

error: Content is protected !!