NEWSಕೃಷಿನಮ್ಮರಾಜ್ಯ

ಕಬ್ಬಿನ ಉಪ ಉತ್ಪನ್ನಗಳ ಲಾಭ ಲೆಕ್ಕ ಹಾಕಿ ಹೆಚ್ಚುವರಿ 3500 ರೂ. ದರ ನಿಗದಿ ಮಾಡಿ: ಕುರುಬೂರು ಶಾಂತಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಕಬ್ಬಿನ ಎಫ್ ಆರ್ ಪಿ ಅವೈಜ್ಞಾನಿಕವಾಗಿರುವ ಕಾರಣ ರಾಜ್ಯ ಸರ್ಕಾರ ರಾಜ್ಯ ಸಲಹಾ ಬೆಲೆ ಕಾಯ್ದೆ ಪ್ರಕಾರ ಉಪ ಉತ್ಪನ್ನಗಳ ಲಾಭ ಲೆಕ್ಕ ಹಾಕಿ ಹೆಚ್ಚುವರಿ ದರ 3500 ರೂ.ಗಳನ್ನು ಕಬ್ಬುದರ ನಿಗದಿ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರ ಕೈಗೊಳ್ಳಲಿ ಪ್ರಧಾನಿ ಬಳಿಗೆ ರೈತ ಮುಖಂಡರನ್ನು ಕರೆದುಕೊಂಡು ಹೋಗಲಿ ಎಂದು ತಿಳಿಸಿದರು.

ಪ್ರಕೃತಿ ವಿಕೋಪ ಅತಿವೃಷ್ಟಿ ಮಳೆ ಹಾನಿ ಪ್ರವಾಹ ಹಾನಿ ಬೆಳೆ ನಷ್ಟ ಪರಿಹಾರ ಎನ್ ಡಿ ಆರ್ ಎಫ್ ಮಾನದಂಡ ತಿದ್ದುಪಡಿ ಮಾಡಲಿ. ಶಾಸಕರು ಸಂಸದರು ಸಚಿವರು ಪ್ರತಿ ವರ್ಷ ಸಂಬಳ ಹೆಚ್ಚಳ ಮಾಡಿ ಕೊಳ್ಳುತ್ತಾರೆ.

ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಸಂಬಳ ಏರಿಕೆ ಮಾಡುತ್ತಾರೆ ಆದರೆ ರೈತರ ಬೆಳೆ ನಷ್ಟ ಪರಿಹಾರ ಮಾನದಂಡವನ್ನು ಎಂಟು ವರ್ಷವಾದರೂ ಏರಿಕೆ ಮಾಡುವುದಿಲ್ಲ ಎಲ್ಲ ಜನಪ್ರತಿನಿಧಿಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ ಇದು ರೈತರಿಗೆ ಮಾಡುವ ಮೋಸವಾಗಿದೆ.

ಮಳೆ ಆಶ್ರಯದ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ 25,000, ನೀರಾವರಿ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 40,000, ವಾಣಿಜ್ಯ ಬೆಳೆಗಳಿಗೆ ಎಕರೆಗೆ 60,000 ರೂ.ಗಳಿಗೆ ಏರಿಕೆ ಮಾಡಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು.

ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಮಳೆ ಹಾನಿ ಪ್ರವಾಹ ಹಾನಿ ರೈತರ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ಪಂಜಾಬ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಕರ್ನಾಟಕ ರಾಜ್ಯಕ್ಕೂ ವಿಶೇಷ ಪ್ಯಾಕೇಜ್ 5000 ಕೋಟಿ ನೀಡಲಿ ಈ ಬಗ್ಗೆ ರಾಜ್ಯದ ಕೇಂದ್ರ ಸಚಿವರು ಸಂಸದರು ಒತ್ತಾಯಿಸಲಿ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಬ್ಬು ಬೆಳೆಯಲು ಒಂದು ಟನ್‌ಗೆ 3700 ರೂ. ವೆಚ್ಚವಾಗುತ್ತದೆ ಎಂದು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ಕೊಟ್ಟಿದೆ ಇದನ್ನು ಅರಿತು ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಲಿ. ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಎಲ್ಲ ಸಕ್ಕರೆ ಕಾರ್ಖಾನೆ ಮುಂಭಾಗ ಸರ್ಕಾರದ ವತಿಯಿಂದ ತೂಕದ ಯಂತ್ರ ಸ್ಥಾಪಿಸಬೇಕು ಎಂದರು.

ಕೃಷಿ ಬಳಕೆಗೆ ಇದ್ದ ನರೇಗಾ ಯೋಜನೆ ಸ್ಥಗಿತಗೊಳಿಸಿರುವುದನ್ನು ಪುನರ್ ಆರಂಭಿಸಿಬೇಕು. ಭತ್ತದ ಕನಿಷ್ಠ ಬೆಂಬಲ ಬೆಲೆ 2369 ರೂ.ಗೆ ಹೆಚ್ಚುವರಿ ಪ್ರೋತ್ಸಾಹ ದನ 500 ರೂ.ನೀಡಿ( ಪ್ರತಿ ಕ್ವಿಂಟಾಲ್ ಗೆ) ರೈತರಿಂದ ಬತ್ತ ಖರೀದಿಸಲು ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಹಸಿರು ಸೇನೆ ಅಧ್ಯಕ್ಷ ಕರಬಸಪ್ಪ ಗೌಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ರೈತ ಸಂಘದ ಅಂಜ್ಜನಪ್ಪ ಪೂಜಾರ, ರಾಜ್ಯ ಉಪಾಧ್ಯಕ್ಷ ದೇವಕುಮಾರ್, ಬರಡನಪುರ ನಾಗರಾಜ್ ಇದ್ದರು.

Megha
the authorMegha

Leave a Reply

error: Content is protected !!